– ಮುರಸೋಳಿ ಪತ್ರಿಕೆಯಲ್ಲಿ ಕರ್ನಾಟಕ, ವಿಜಯ್ ವಿರುದ್ಧ ಆಕ್ರೋಶ
– ಮೇಕೆದಾಟು ವಿಚಾರದಲ್ಲಿ ವಿಜಯ್ ಮೌನಕ್ಕೆ ಆಕ್ಷೇಪ
ಚೆನ್ನೈ: ಮೇಕೆದಾಟು ಅಣೆಕಟ್ಟು(Mekedatu Dam) ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ (Vijay) ಅವರು ಸಮಸ್ಯೆಯನ್ನು ‘ಸಿನಿಮಾ ಶೈಲಿ’ಯಲ್ಲಿ (Filmi style) ನಿಭಾಯಿಸುತ್ತಿದ್ದಾರೆ ಎಂದು ವಿರೋಧ ಪಕ್ಷ ಡಿಎಂಕೆ ತೀವ್ರ ವಾಗ್ದಾಳಿ ನಡೆಸಿದೆ.
ಸಿನಿಮಾದಲ್ಲಿ ‘ಸೋಲೋ ಪರ್ಫಾರ್ಮೆನ್ಸ್’ ನೀಡಿದಂತೆ, ರಾಜ್ಯದ ಜೀವನಾಡಿಯಾಗಿರುವ ಕಾವೇರಿ ಮತ್ತು ಮೇಕೆದಾಟು ವಿಚಾರದಲ್ಲಿ ಏಕಾಂಗಿಯಾಗಿ ವರ್ತಿಸದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ಡಿಎಂಕೆ(DMK) ಆಗ್ರಹಿಸಿದೆ. ಡಿಎಂಕೆಯ ಮುಖವಾಣಿ ‘ಮುರಸೋಳಿ’ ಪತ್ರಿಕೆಯಲ್ಲಿ ಸಿಎಂ ವಿಜಯ್ ಹಾಗೂ ಕರ್ನಾಟಕ ಕಾಂಗ್ರೆಸ್(Karnataka Congress) ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಲಾಗಿದೆ.
ಮೇಕೆದಾಟು ಸಮಸ್ಯೆ ಸಿನಿಮಾವಲ್ಲ. ಇದು ಕೋಟ್ಯಂತರ ತಮಿಳು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಗಂಭೀರ ವಿಷಯ. ಇಂತಹ ವಿಚಾರದಲ್ಲಿ ಸಿಎಂ ವಿಜಯ್ ಕೇವಲ ಸಿನಿಮಾ ಡೈಲಾಗ್ಗಳನ್ನು ಹೊಡೆದು ಆರು ತಿಂಗಳ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಸಿನಿಮಾಗಳಲ್ಲಿ ಅವರು ಸೋಲೋ ಪರ್ಫಾರ್ಮೆನ್ಸ್ ನೀಡಲಿ, ಆದರೆ ಮುಖ್ಯಮಂತ್ರಿಯಾಗಿ ರಾಜ್ಯದ ಪ್ರಮುಖ ವಿಚಾರಗಳಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ಪತ್ರಿಕೆ ಸಲಹೆ ಹೇಳಿದೆ.
ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿರುವ ಮುರಸೋಳಿ, ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿರುವಾಗ ಕರ್ನಾಟಕ ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡಬೇಕೇ? ಮೇಕೆದಾಟು ಅಣೆಕಟ್ಟು ಕಟ್ಟುವುದೊಂದೇ ತಮ್ಮ ಜೀವಮಾನದ ಗುರಿ (Lifetime lakshya) ಎಂಬಂತೆ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದೆ. ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಗ್ಗಟ್ಟಿನ ವಿರೋಧ ವ್ಯಕ್ತಪಡಿಸಲು ತಕ್ಷಣವೇ ಸರ್ವಪಕ್ಷ ಸಭೆ ಕರೆಯುವಂತೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಸಿಎಂ ವಿಜಯ್ ಮುಖಾಮುಖಿಯಾಗಿ ಭೇಟಿಯಾಗಿದ್ದರು. ಈ ಭೇಟಿಯು ತಮಿಳುನಾಡಿನ ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದೆಹಲಿ ಭೇಟಿಯ ವೇಳೆ ಕಾಂಗ್ರೆಸ್ ನಾಯಕರ ಮುಂದೆ ಮೇಕೆದಾಟು ವಿಚಾರ ಪ್ರಸ್ತಾಪಿಸದ ಸಿಎಂ ವಿಜಯ್ ತಮಿಳುನಾಡಿನ ಜನರಿಗೆ “ಬೆನ್ನಿಗೆ ಚೂರಿ ಹಾಕಿದ್ದಾರೆ” ಎಂದು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಆರೋಪಿಸಿದ್ದಾರೆ. “ಕಾಂಗ್ರೆಸ್ ಬೆಂಬಲ ಹಿಂಪಡೆದರೆ ಸರ್ಕಾರ ಬಿದ್ದುಹೋಗುತ್ತದೆ ಎಂಬ ಭಯದಿಂದ ವಿಜಯ್ ಬೆನ್ನುಮೂಳೆಯಿಲ್ಲದವರಂತೆ ವರ್ತಿಸುತ್ತಿದ್ದಾರೆ. ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದಕ್ಕಿಂತ ಸಿಎಂ ಕುರ್ಚಿ ಉಳಿಸಿಕೊಳ್ಳುವುದೇ ಅವರಿಗೆ ಮುಖ್ಯವಾಗಿದೆ” ಎಂದು ಕಿಡಿಕಾರಿದ್ದಾರೆ.
“ತಮಿಳುನಾಡಿನಲ್ಲಿ ಕಾವೇರಿ ಎಂಬ ನದಿಯಿದೆ ಮತ್ತು ಮೇಕೆದಾಟು ವಿವಾದವಿದೆ ಎಂಬುದೇ ಸಿಎಂ ವಿಜಯ್ಗೆ ಗೊತ್ತಿಲ್ಲ. ಈ ಹಿಂದೆ ಕರ್ನಾಟಕಕ್ಕೆ ಹೋಗಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಬಂದರಷ್ಟೇ” ಎಂದು ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ ವ್ಯಂಗ್ಯವಾಡಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡಿನ ವಿರೋಧವನ್ನು ಮೊದಲು ದಾಖಲಿಸದೆ ಸಿಎಂ ದೆಹಲಿಗೆ ಹೋಗಬಾರದಿತ್ತು. ಕರ್ನಾಟಕ ಸಿಎಂ ತಮಿಳುನಾಡಿನ ಹಕ್ಕುಗಳನ್ನು ಬಹಿರಂಗವಾಗಿ ನಿರಾಕರಿಸುತ್ತಿರುವಾಗ, ಕಾಂಗ್ರೆಸ್ ನಾಯಕರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿರುವುದು ಯಾವ ಸಂದೇಶ ನೀಡುತ್ತದೆ ಎಂದು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಪ್ರಶ್ನಿಸಿದ್ದಾರೆ.
ವಿಜಯ್ ಜೊತೆಗಿನ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್, “ನಾವಿಬ್ಬರೂ ಸ್ನೇಹಿತರು. ಅವರಿಗೆ ಅವರದ್ದೇ ಆದ ರಾಜಕೀಯ ಸಮಸ್ಯೆಗಳಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಡಿಎಂಕೆ, ಎಐಎಡಿಎಂಕೆ ನಾಯಕರು ಸರಿಯಾಗಿ ನೋಡಲಿ. ತಮಿಳುನಾಡಿಗೆ ನೀರು ಬಿಡಲು ನಾವು ಬದ್ಧರಾಗಿದ್ದೇವೆ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಮತ್ತು ನಾವು ಅದನ್ನು ಪಾಲಿಸುತ್ತೇವೆ. ಅವರು ಮರುಪರಿಶೀಲನಾ ಅರ್ಜಿಯನ್ನೂ ಸಲ್ಲಿಸಿದ್ದರು, ಏನಾಯಿತು?” ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಆಗಸ್ಟ್ 7ರಂದು ಮಾತನಾಡಿದ್ದ ಸಿಎಂ ವಿಜಯ್, ತಮಿಳುನಾಡು ಜನರ ಹಿತದೃಷ್ಟಿಯಿಂದ ಅವಮಾನ ಸಹಿಸಿಕೊಂಡಾದರೂ ಕರ್ನಾಟಕದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿದ್ದರು. ಆದರೆ, ಕಾವೇರಿ ಮತ್ತು ಮೇಕೆದಾಟು ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
