– ಸೋನಿಯಾ ಪುಸ್ತಕ ಬಿಡುಗಡೆಯಲ್ಲಿ 5ನೇ ಸಾಲಿನಲ್ಲಿ ಆಸನ
ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ‘ಮಾಜಿ’ಯಾಗುತ್ತಿದ್ದಂತೆಯೇ ದೆಹಲಿ ಹೈಕಮಾಂಡ್(Delhi High Command) ಮಟ್ಟದಲ್ಲಿ ಸಿದ್ದರಾಮಯ್ಯ(Siddaramaiah) ಅವರ ಪ್ರಭಾವ ಕಡಿಮೆಯಾಯಿತೇ ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರಿಗೆ ನೀಡಲಾದ ಆಸನ ವ್ಯವಸ್ಥೆಯೇ ಈ ಎಲ್ಲಾ ಚರ್ಚೆಗಳಿಗೆ ಮೂಲ ಕಾರಣವಾಗಿದೆ.
ಆಯ್ದ ಕಾಂಗ್ರೆಸ್ ನಾಯಕರು ಮತ್ತು ಗಣ್ಯರಿಗಷ್ಟೇ ಆಹ್ವಾನವಿದ್ದ ಈ ಪ್ರತಿಷ್ಠಿತ ಸಮಾರಂಭದಲ್ಲಿ, ಕರ್ನಾಟಕದ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ಎರಡನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಅವರಿಗೆ ಐದನೇ ಸಾಲಿನಲ್ಲಿ ಆಸನ ನೀಡಲಾಗಿತ್ತು.
ಸಿದ್ದರಾಮಯ್ಯ ಅವರು 5ನೇ ಸಾಲಿನಲ್ಲಿ ಕುಳಿತಿರುವ ಫೋಟೋಗಳು ಹೊರಬೀಳುತ್ತಿದ್ದಂತೆಯೇ, “ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಹಿಂದಿನ ಸಾಲಿಗೆ ತಳ್ಳಿತಾ?” ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕಾರ್ಯಕ್ರಮದ ಮೊದಲ ಸಾಲನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಇಂಡಿಯಾ (INDIA) ಒಕ್ಕೂಟದ ಪ್ರಮುಖ ನಾಯಕರಿಗೆ ಮೀಸಲಿಡಲಾಗಿತ್ತು. ವಿಶೇಷವೆಂದರೆ ಬಿಜೆಪಿಗೆ ಸೇರ್ಪಡೆಯಾಗಿರುವ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೂ ಮೊದಲ ಸಾಲಿನಲ್ಲಿ ಸ್ಥಾನ ನೀಡಲಾಗಿತ್ತು. ಇದನ್ನೂ ಓದಿ: ಪ್ರತಿದಿನ ಊಟದ ಸಮಯದಲ್ಲಿ ತಾಯಿ, ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದರು: ರಾಹುಲ್
ಇನ್ನು ಎರಡನೇ ಸಾಲಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕುಟುಂಬಸ್ಥರು ಹಾಗೂ ಹಾಲಿ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಆಸನ ಕಲ್ಪಿಸಲಾಗಿತ್ತು. ಮೂರು ಮತ್ತು ನಾಲ್ಕನೇ ಸಾಲಿನಲ್ಲೂ ಹಲವು ಗಣ್ಯರು ಕುಳಿತಿದ್ದರು. ಆದರೆ, ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರಿಗೆ ಐದನೇ ಸಾಲಿನಲ್ಲಿ ಆಸನ ನೀಡಿದ್ದು ಆಯೋಜಕರ ಕಣ್ತಪ್ಪಿನಿಂದ ಆದ ಪ್ರಮಾದವೋ ಅಥವಾ ಹೈಕಮಾಂಡ್ನ ಉದ್ದೇಶಪೂರ್ವಕ ಸಂದೇಶವೋ ಎಂಬ ಚರ್ಚೆ ಜೋರಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು, ಅದಕ್ಕಾಗಿ ಬಂದಿದ್ದೆ. ನಾನು ಇನ್ನೂ ಆ ಪುಸ್ತಕವನ್ನು ಓದಿಲ್ಲ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದರು, ಸಂವಾದವೂ ನಡೆಯಿತು. ನಾನು ಕೇವಲ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಷ್ಟೇ ಬಂದಿದ್ದೆ, ಇಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ” ಎಂದು ಸ್ಪಷ್ಟಪಡಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ.
