– ಅಮೆರಿಕ ಗುಪ್ತಚರ ಇಲಾಖೆ ಸ್ಫೋಟಕ ವರದಿ
– ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದ ಭದ್ರತಾ ಸಂಸ್ಥೆಗಳು
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್(US Iran War) ನಡುವಿನ ಸಂಘರ್ಷ ತೀವ್ರಗೊಂಡಿರುವ ನಡುವೆಯೇ, ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಟ್ರಂಪ್ (Donald Trump) ಆಡಳಿತದ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ವಿಕಿರಣಶೀಲ ಡರ್ಟಿ ಬಾಂಬ್ (Dirty Bomb) ಅಥವಾ ರಾಸಾಯನಿಕ ಅಸ್ತ್ರಗಳ ಮೂಲಕ ದಾಳಿ ನಡೆಸಲು ಇರಾನ್ ಪರ್ಯಾಯ ಯೋಜನೆಗಳನ್ನು (Contingency plans) ರೂಪಿಸುತ್ತಿದೆ ಎಂಬ ಸ್ಫೋಟಕ ವಿಚಾರ ಬಹಿರಂಗವಾಗಿದೆ.
ಅಮೆರಿಕದ ಗುಪ್ತಚರ ಇಲಾಖೆಯ ಮಾಹಿತಿಯನ್ನು ತಿಳಿದಿರುವ ಏಳು ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ಈ ಕುರಿತು ವರದಿ ಮಾಡಿದೆ. ಅಮೆರಿಕದ ರಾಜಧಾನಿಯ ನಿರ್ದಿಷ್ಟ ಸ್ಥಳಗಳು ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುವ ಬಗ್ಗೆ ಗುಪ್ತಚರ ಮಾಹಿತಿ ಸುಳಿವು ನೀಡಿದ್ದು, ಅಮೆರಿಕದ ಭದ್ರತಾ ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನದ ವಕ್ತಾರೆ ಲಾರೆನ್ ಬಿಸ್, “ಅಮೆರಿಕವು ಎಲ್ಲಾ ಸಂಭಾವ್ಯ ಬೆದರಿಕೆಗಳ ಮೇಲೆ ನಿಗಾ ಇಟ್ಟಿದೆ. ಆದರೆ ಪ್ರಸ್ತುತ ದೇಶದೊಳಗೆ ಯಾವುದೇ ತಕ್ಷಣದ ವಿಶ್ವಾಸಾರ್ಹ ಬೆದರಿಕೆಗಳಿಲ್ಲ” ಎಂದು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಯುದ್ಧ “ಶೀಘ್ರದಲ್ಲೇ ಮುಗಿಯಲಿದೆ” ಎಂದು ಹೇಳಿದ್ದರು. ಆದಾಗ್ಯೂ, ಹಾರ್ಮುಜ್ ಜಲಸಂಧಿಯ ಸುತ್ತ ಉದ್ವಿಗ್ನತೆ ಮುಂದುವರಿದಿದೆ.
ಅಮೆರಿಕದ ಮಿಲಿಟರಿ ಒತ್ತಡ ಮತ್ತು ಆರ್ಥಿಕ ದಿಗ್ಬಂಧನದಿಂದ ಕಂಗೆಟ್ಟಿರುವ ಇರಾನ್, ಸಂಘರ್ಷವನ್ನು ಮಧ್ಯಪ್ರಾಚ್ಯದ ಆಚೆಗೂ ವಿಸ್ತರಿಸಲು ಯೋಚಿಸುತ್ತಿರಬಹುದು ಎಂದು ಗುಪ್ತಚರ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಬಾಂಬ್ ತಯಾರಿಕಾ ಸಾಮಗ್ರಿಗಳನ್ನು ಈಗಾಗಲೇ ಅಮೆರಿಕದೊಳಗೆ ಸಂಗ್ರಹಿಸಿಡಲಾಗಿದೆ ಎಂಬ ಇರಾನಿನ ಸಂವಹನಗಳನ್ನು ಗುಪ್ತಚರ ಇಲಾಖೆ ಪತ್ತೆಹಚ್ಚಿದೆ ಎನ್ನಲಾಗಿದೆ.
ಕಳೆದ ಹತ್ತು ವರ್ಷಗಳಿಂದ ನಮ್ಮ ಗಡಿಗಳು ದುರ್ಬಲವಾಗಿದ್ದ ಕಾರಣ, ಇರಾನ್ ಏಜೆಂಟರು ದೇಶದೊಳಗೆ ನುಸುಳಿ ಬಾಂಬ್ ಬಿಡಿಭಾಗಗಳನ್ನು ಸಂಗ್ರಹಿಸಿಡುವುದು ಅತ್ಯಂತ ಸುಲಭವಾಗಿತ್ತು ಎಂದು ಮೂಲವೊಂದು ತಿಳಿಸಿದೆ. ಆದರೆ ಇರಾನ್ ಬಳಿ ದಾಳಿ ನಡೆಸಲು ಬೇಕಾದ ಸಿಬ್ಬಂದಿ ಮತ್ತು ಕಾರ್ಯಾಚರಣೆಯ ಸಾಮರ್ಥ್ಯ ಇದೆಯೇ ಎಂಬ ಬಗ್ಗೆ ಅಮೆರಿಕದ ಅಧಿಕಾರಿಗಳಲ್ಲೇ ಭಿನ್ನಾಭಿಪ್ರಾಯವಿದೆ.
ಏನಿದು ಡರ್ಟಿ ಬಾಂಬ್?
ಡರ್ಟಿ ಬಾಂಬ್ ಎಂಬುದು ಸಾಂಪ್ರದಾಯಿಕ ಸ್ಫೋಟಕ ಸಾಧನವಾಗಿದ್ದು, ಸ್ಫೋಟದ ಮೂಲಕ ವಿಕಿರಣಶೀಲ (Radioactive) ವಸ್ತುಗಳನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇದು ಪರಮಾಣು ಬಾಂಬ್ನಂತೆ ಭಾರಿ ವಿನಾಶಕಾರಿ ಸ್ಫೋಟವನ್ನು ಉಂಟುಮಾಡದಿದ್ದರೂ, ವಿಕಿರಣವನ್ನು ಹರಡುವ ಮೂಲಕ ಜನರ ಆರೋಗ್ಯಕ್ಕೆ ತೀವ್ರ ಹಾನಿ ಮಾಡುತ್ತದೆ ಮತ್ತು ಆ ಪ್ರದೇಶವನ್ನು ವಾಸಕ್ಕೆ ಯೋಗ್ಯವಲ್ಲದಂತೆ ಮಾಡುತ್ತದೆ. ಇದೊಂದು ಭಯೋತ್ಪಾದಕ ಅಸ್ತ್ರವಾಗಿದ್ದು, ವಿಕಿರಣಶೀಲ ವಸ್ತುಗಳನ್ನು ಸಂಗ್ರಹಿಸುವುದೇ ಇರಾನ್ಗೆ ಇರುವ ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಣ್ಗಾವಲು ಕಾನೂನು ರದ್ದತಿ
ವಿದೇಶಿ ಪ್ರಜೆಗಳ ಸಂವಹನದ ಮೇಲೆ ನಿಗಾ ಇಡಲು ಅನುವು ಮಾಡಿಕೊಡುತ್ತಿದ್ದ ಅಮೆರಿಕದ ಪ್ರಮುಖ ಕಣ್ಗಾವಲು ಕಾನೂನು ಕಳೆದ ಜೂನ್ನಲ್ಲಿ ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ ಅವಧಿ ಮುಗಿದು ರದ್ದಾಗಿದೆ. ಈ ಕಾನೂನನ್ನು ತಕ್ಷಣವೇ ಮರುಸ್ಥಾಪಿಸುವಂತೆ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ, ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜೇ ಕ್ಲೇಟನ್ ಮತ್ತು ಸಿಐಎ ನಿರ್ದೇಶಕ ಜಾನ್ ರಾಟ್ಕ್ಲಿಫ್ ಅವರು ಸಂಸದರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಾನೂನಿನ ವಿಳಂಬವು ಅಮೆರಿಕನ್ನರ ಮತ್ತು ವಿದೇಶದಲ್ಲಿರುವ ಸೈನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಆರೋಪ ತಳ್ಳಿಹಾಕಿದ ಇರಾನ್
ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಇರಾನ್ ನಿಯೋಗವು ರಾಸಾಯನಿಕ ಅಸ್ತ್ರಗಳ ಬಳಕೆಯ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಯಾವುದೇ ಸಂದರ್ಭದಲ್ಲೂ ರಾಸಾಯನಿಕ ಅಸ್ತ್ರಗಳ ಬಳಕೆಯನ್ನು ಇರಾನ್ ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಪರಿಗಣಿಸುತ್ತದೆ ಮತ್ತು ಈ ಸುಳ್ಳು, ಕಪೋಲಕಲ್ಪಿತ ಆರೋಪಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದು ಇರಾನ್ ವಕ್ತಾರರು ತಿಳಿಸಿದ್ದಾರೆ. ಆದರೆ ಡರ್ಟಿ ಬಾಂಬ್ ಸಂಚಿನ ವರದಿಯ ಬಗ್ಗೆ ಅವರು ನೇರವಾಗಿ ಪ್ರತಿಕ್ರಿಯಿಸಿಲ್ಲ.
ಮಧ್ಯಪ್ರಾಚ್ಯದಲ್ಲೂ ದಾಳಿ ಭೀತಿ:
ವಾಷಿಂಗ್ಟನ್ ಮೇಲಿನ ಬೆದರಿಕೆಯ ಜೊತೆಗೆ, ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಸೈನಿಕರು ಮತ್ತು ರಾಜತಾಂತ್ರಿಕ ಸಿಬ್ಬಂದಿಯ ಮೇಲೆ ಇರಾನ್ ರಾಸಾಯನಿಕ ಅಸ್ತ್ರಗಳನ್ನು ಬಳಸಬಹುದು ಎಂಬ ಮಾಹಿತಿಯೂ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿನ ಸಿಬ್ಬಂದಿಗೆ ಅಗತ್ಯ ರಕ್ಷಣಾತ್ಮಕ ಉಪಕರಣಗಳು ಮತ್ತು ತರಬೇತಿ ನೀಡಲು ಅಮೆರಿಕ ತುರ್ತು ಸಿದ್ಧತೆಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.
