ಕೈರೋ: ಭಾರತದಲ್ಲಿ (India) ವಿಮಾನಗಳ (Planes) ಕೊರತೆ ಕಂಡುಬರುತ್ತಿದ್ದು, ಹೆಚ್ಚುತ್ತಿರುವ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು 1,000 ನಾಗರಿಕ ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ತಿಳಿಸಿದ್ದಾರೆ.
ಎರಡು ದಿನಗಳ ಈಜಿಪ್ಟ್ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಭಾರತವು ಈಗಾಗಲೇ 1,200 ಕ್ಕೂ ಹೆಚ್ಚು ವಿಮಾನಗಳ ಖರೀದಿಗೆ ಆದೇಶ ನೀಡಿದೆ. ಆದರೆ ವಾಯು ಸಂಚಾರದ ಬೇಡಿಕೆ ಹೆಚ್ಚುತ್ತಿದ್ದು, ಇದಕ್ಕಾಗಿ 2,000 ಕ್ಕೂ ಹೆಚ್ಚು ವಿಮಾನಗಳು ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ನೆಲದಲ್ಲಿ ಇಟಲಿ ನಾಯಕನಿಂದ ನಿಂದನೆ – ಈ ರೀತಿಯ ಹಸ್ತಕ್ಷೇಪ ಸರಿಯಲ್ಲ ಎಂದ ಮೆಲೋನಿ ಆಪ್ತೆ
ಭಾರತ ಮತ್ತು ಈಜಿಪ್ಟ್ ನಡುವೆ ವಾಯು ಸಂಪರ್ಕವನ್ನು ವಿಸ್ತರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿಮಾನಯಾನ ಸಂಸ್ಥೆಗಳು ಈ ಮಾರ್ಗದಲ್ಲಿ ಹೆಚ್ಚುವರಿ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಿವೆ ಎಂದು ಅವರು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ಗೋಯಲ್ ಅವರು ಭಾರತ ಹಾಗೂ ಈಜಿಫ್ಟ್ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲು ಅಲ್ಲಿಗೆ ತೆರಳಿದ್ದಾರೆ.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭಾರತದ ಇಂಡಿಗೊ ಮತ್ತು ಏರ್ ಇಂಡಿಯಾ ಕಂಪನಿಗಳು ಜಾಗತಿಕ ವಿಮಾನ ತಯಾರಕರಾದ ಏರ್ಬಸ್ ಮತ್ತು ಬೋಯಿಂಗ್ನೊಂದಿಗೆ ಹೆಚ್ಚಿನ ವಿಮಾನಗಳನ್ನು ಖರೀದಿಸುತ್ತಿವೆ.
ಬ್ರೆಜಿಲಿಯನ್ ವಿಮಾನ ತಯಾರಕ ಕಂಪನಿ ಎಂಬ್ರೇರ್ ಸಹ ಭಾರತದಲ್ಲಿ ಪ್ರಾದೇಶಿಕ ವಿಮಾನ ಉತ್ಪಾದನಾ ಘಟಕ ಸ್ಥಾಪಿಸಲು ಅದಾನಿ ಗ್ರೂಪ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದನ್ನೂ ಓದಿ: ಅತ್ತೆಯನ್ನು ನೋಡಿದಾಗ ಭಯವಾಗ್ತಿತ್ತು – ಸೋನಿಯಾ ಗಾಂಧಿ
