ನವದೆಹಲಿ: ಭಾರತೀಯ ಚುನಾವಣಾ ಆಯೋಗವನ್ನು (ECI) ಔಪಚಾರಿಕವಾಗಿ ಪ್ರಶ್ನಿಸಲು ಅನುಮತಿ ನೀಡುವಂತೆ ಕೋರಿ ವಿರೋಧ ಪಕ್ಷಗಳು ಸೋಮವಾರ ಸುಪ್ರೀಂ ಕೋರ್ಟ್ಗೆ(Supreme Court) ಅರ್ಜಿ ಸಲ್ಲಿಸಿವೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯ ಆಯೋಗವು ತನ್ನ ಪ್ರತಿಕ್ರಿಯೆಯಲ್ಲಿ ಸೂಕ್ತ ದಾಖಲೆಗಳು ಮತ್ತು ವಾಸ್ತವಾಂಶಗಳನ್ನು ನ್ಯಾಯಾಲಯದ ಮುಂದಿಡುವ ಬದಲು ಕೇವಲ ಸಮರ್ಥನೆಗಳನ್ನು ಮಾತ್ರ ನೀಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ವಿವಿಧ ಅಂಶಗಳ ಕುರಿತು ಅಧಿಕೃತ ದಾಖಲೆಗಳ ಬೆಂಬಲದೊಂದಿಗೆ ವಿವರವಾದ ಉತ್ತರಗಳನ್ನು ಪಡೆಯಲು ಈ ವಿಚಾರಣೆ ಅಗತ್ಯವಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ತಾವು ಕೇಳುತ್ತಿರುವ ಮಾಹಿತಿ ಮತ್ತು ದಾಖಲೆಗಳು ಚುನಾವಣಾ ಆಯೋಗದ ಬಳಿ ಮಾತ್ರ ಲಭ್ಯವಿದ್ದು, ಆಯೋಗದ ಸ್ವಂತ ಹೇಳಿಕೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಈ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಇಂಡಿಯಾ (INDIA) ಮೈತ್ರಿಕೂಟದ ಅರ್ಜಿದಾರರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar), ಚುನಾವಣಾ ಆಯುಕ್ತರಾದ ಡಾ. ಸುಖ್ಬೀರ್ ಸಿಂಗ್ ಸಂಧು, ಡಾ. ವಿವೇಕ್ ಜೋಶಿ ಹಾಗೂ ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ್ ಯೇತೂರು ಸೇರಿದಂತೆ ಇತರ ಅಧಿಕಾರಿಗಳಿಂದ ಉತ್ತರ ಕೋರಿ 48 ಪ್ರಶ್ನೆಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್ಗೆ (Supreme Court) ಸಲ್ಲಿಸಿದ್ದಾರೆ.
ಆಯೋಗವು ಒಂದು ಸಂಸ್ಥೆಯಾಗಿ ನಿರ್ದಿಷ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆಯೇ? ಯಾವಾಗ ಮತ್ತು ಯಾವ ರೀತಿಯಲ್ಲಿ ಅವುಗಳನ್ನು ತೆಗೆದುಕೊಳ್ಳಲಾಗಿದೆ? ಆಯೋಗದ ಹೆಸರಿನಲ್ಲಿ ನಿರ್ದಿಷ್ಟ ಕ್ರಮಗಳಿಗೆ ಅಧಿಕಾರ ನೀಡಿದವರು ಯಾರು? ಹಾಗೂ ಇಸಿನೆಟ್ ಅನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ವಹಿಸಲಾಗುತ್ತಿದೆ? ಎಂಬುದರ ಕುರಿತು ಅರ್ಜಿದಾರರಿಗೆ ಪ್ರತಿವಾದಿಗಳ ಮೂಲಕವೇ ಮಾಹಿತಿ ಸಿಗಬೇಕಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಜೀವಾವಧಿ ಶಿಕ್ಷೆ ಅಮಾನತು – ಇಬ್ಬರು ಅಪರಾಧಿಗಳಿಗೆ ಜಾಮೀನು
ಏನೇನು ಪ್ರಶ್ನೆ ಕೇಳಲಾಗಿದೆ?
2025ರ ಫೆಬ್ರವರಿ 19ರಿಂದ 2026ರ ಅಕ್ಟೋಬರ್ 26ರ ನಡುವೆ SIR, ECINET, ಫಾರ್ಮ್-6 ಅಥವಾ ಮೇಲ್ಮನವಿಗಳಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತು ಚುನಾವಣಾ ಆಯುಕ್ತರಾದ ಡಾ. ಸುಖ್ಬೀರ್ ಸಿಂಗ್ ಸಂಧು ಅಥವಾ ಡಾ. ವಿವೇಕ್ ಜೋಶಿ ಅವರು ಲಿಖಿತವಾಗಿ ಆಕ್ಷೇಪಣೆ ಅಥವಾ ಭಿನ್ನಮತ ದಾಖಲಿಸಿದ್ದರೆ, ಅದರ ದಿನಾಂಕ, ಕಡತ ಸಂಖ್ಯೆ ಮತ್ತು ವಿಷಯವನ್ನು ಬಹಿರಂಗಪಡಿಸಬೇಕು. ಅಲ್ಲದೆ, 2023ರ ಕಾಯ್ದೆಯ ಸೆಕ್ಷನ್ 18(2)ರ ಅಡಿಯಲ್ಲಿ ಬಹುಮತದ ಆಧಾರದ ಮೇಲೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು.
ದೇಶಾದ್ಯಂತ SIR ನಡೆಸುವ ನಿರ್ಧಾರವನ್ನು ಯಾವಾಗ ಮತ್ತು ಯಾವ ಅಧಿಕೃತ ಪ್ರಕ್ರಿಯೆಯ ಮೂಲಕ ತೆಗೆದುಕೊಳ್ಳಲಾಗಿದೆ? 2025ರಲ್ಲಿ ರಾಷ್ಟ್ರವ್ಯಾಪಿ SIR ಘೋಷಿಸಿ ಆಯೋಗ ಹೊರಡಿಸಿದ ಆದೇಶಕ್ಕೂ, ನಂತರದ ಆರ್ಟಿಐ (RTI) ಪ್ರತಿಕ್ರಿಯೆಯಲ್ಲಿ ‘ಅಂತಹ ಯಾವುದೇ ನಿರ್ಧಾರದ ಮಾಹಿತಿ ಆಯೋಗದ ಬಳಿ ಲಭ್ಯವಿಲ್ಲ’ ಎಂದು ವಿರೋಧಾಭಾಸದ ಉತ್ತರ ನೀಡಿದ್ದು ಯಾಕೆ? ತುರ್ತು ಅನುಮೋದನೆಗಳನ್ನು ವಾಟ್ಸಾಪ್ ಅಥವಾ ವೈಯಕ್ತಿಕ ಇಮೇಲ್ ಮೂಲಕ ಪಡೆಯಲಾಗಿದೆಯೇ ಎಂದೂ ಪ್ರಶ್ನಿಸಲಾಗಿದೆ.
ಮತದಾರರ ಪಟ್ಟಿಯ ಡೇಟಾಬೇಸ್ನಲ್ಲಿ ಹೆಸರುಗಳನ್ನು ಸೇರಿಸಲು, ಅಳಿಸಲು ಅಥವಾ ತಿದ್ದುಪಡಿ ಮಾಡಲು ಯಾರಿಗೆ ಅಧಿಕಾರ ನೀಡಲಾಗಿದೆ? ಖಾಸಗಿ ವೆಂಡರ್ಗಳು ಅಥವಾ ಗುತ್ತಿಗೆದಾರರ ಉದ್ಯೋಗಿಗಳಿಗೆ ಡೇಟಾಬೇಸ್ ತಿದ್ದುಪಡಿ ಮಾಡುವ (Write Access) ಅವಕಾಶ ನೀಡಲಾಗಿತ್ತೇ? ಚುನಾವಣಾ ನೋಂದಣಾಧಿಕಾರಿಗಳ (ERO) ಆದೇಶವಿಲ್ಲದೆ ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆಯೇ? ಹಾಗೂ ಡಾ. ವಿವೇಕ್ ಜೋಶಿ ಅವರು ಸೂಚಿಸಿದ್ದ ಆಕ್ಸೆಸ್ ಆಡಿಟ್ ಪ್ರಸ್ತಾವನೆಯ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕರಿಂದ ಸ್ಪಷ್ಟನೆ ಕೋರಲಾಗಿದೆ.
ಆನ್ಲೈನ್ ಫಾರ್ಮ್-6ರಲ್ಲಿ ಹೊಸ ಘೋಷಣಾ ಪತ್ರವನ್ನು ಸೇರ್ಪಡೆ ಮಾಡಲು ಅನುಮತಿ ನೀಡಿದವರು ಯಾರು? ಈ ಘೋಷಣಾ ಪತ್ರ ಸಲ್ಲಿಸದ ಕಾರಣಕ್ಕೆ ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಅಥವಾ ಬಾಕಿ ಉಳಿಸಿಕೊಳ್ಳಲಾಗಿದೆ? ಕರಡು ಮತ್ತು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ರಾಜ್ಯವಾರು ಅಂಕಿಅಂಶಗಳನ್ನು ನೀಡುವಂತೆ ಕೇಳಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮತದಾರರ ಸೇರ್ಪಡೆ ಕುರಿತು ನ್ಯಾಯಾಂಗ ಅಧಿಕಾರಿಗಳು ಹೊರಡಿಸಿದ ಆದೇಶಗಳ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಸಂಖ್ಯೆ, ಅವುಗಳಿಗೆ ಅನುಮತಿ ನೀಡಿದ ಅಧಿಕಾರಿಗಳು ಹಾಗೂ ಪ್ರಕರಣಗಳ ಆಯ್ಕೆಗೆ ಬಳಸಿದ ಮಾನದಂಡಗಳ ವಿವರಗಳನ್ನು ನೀಡುವಂತೆ ಕೋರಲಾಗಿದೆ.
ಅರ್ಜಿ ಸಲ್ಲಿಸಿದವರು ಯಾರು?
SIR ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ನಾಯಕ ಸೌಗತ ರಾಯ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಸಿಪಿಐ(ಎಂ) ನಾಯಕ ಎಂ.ಎ. ಬೇಬಿ, ಸಿಪಿಐ ನಾಯಕ ಡಿ. ರಾಜಾ, ಜೆಎಂಎಂನ ಮಹುವಾ ಮಾಜಿ, ಎನ್ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಮತ್ತು ಐಯುಎಂಎಲ್ ನಾಯಕ ಮೊಹಮ್ಮದ್ ಬಶೀರ್ ಅವರು ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅಕ್ಟೋಬರ್ 15ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಆಯೋಗವು ಎರಡು ಅಫಿಡವಿಟ್ಗಳನ್ನು ಸಲ್ಲಿಸಿ, SIRಗೆ ಸಂಬಂಧಿಸಿದ ಎಲ್ಲಾ ಮೂರು ಪ್ರಮುಖ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿತ್ತು. ಅಕ್ಟೋಬರ್ 27ರ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಆಯೋಗದ ಅಫಿಡವಿಟ್ಗೆ ಪ್ರತಿಕ್ರಿಯಿಸಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ನಿಗದಿಪಡಿಸಿದೆ.

