– ಸಾಹುಕಾರ್ ಸೇರಿ ನಾಲ್ವರ ವಿರುದ್ಧ ಇ.ಡಿ ಚಾರ್ಜ್ಶೀಟ್ ಸಲ್ಲಿಕೆ
– ಕೋಟ್ಯಂತರ ರೂ. ಅಕ್ರಮ ಬಯಲು
– ಡೀಲ್ಗಾಗಿ 10 ಅಭ್ಯರ್ಥಿಗಳಿಂದ ಒಟ್ಟು 3.20 ಕೋಟಿ ಬೇಡಿಕೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೆಂಗಳೂರಿನ ಪಿಎಂಎಲ್ಎ (PMLA) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ.
ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್(Shivashankarappa Sahukar) ಸದಸ್ಯೆ ಬಿ.ವಿ. ಗೀತಾ ಶಿವಮೂರ್ತಿ, ಆಗಿನ ಪರೀಕ್ಷಾ ನಿಯಂತ್ರಕ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ವಿರುದ್ಧ ಈ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
2026ರ ಜನವರಿ 9ರಂದು ನಡೆದ 400 ಪಶು ವೈದ್ಯಾಧಿಕಾರಿ ಹುದ್ದೆಗಳ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ಪ್ರಕರಣಗಳನ್ನು ಆಧರಿಸಿ ಇ.ಡಿ ತನಿಖೆ ಕೈಗೆತ್ತಿಕೊಂಡಿತ್ತು. ತನಿಖೆಯ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ, ಕೀ ಉತ್ತರ ನೀಡಿಕೆ ಮತ್ತು 1:3 ಅರ್ಹತಾ ಪಟ್ಟಿಯ ದುರುಪಯೋಗ ಸೇರಿದಂತೆ ಹಲವು ಸ್ಫೋಟಕ ಸಂಗತಿಗಳು ಬಯಲಾಗಿವೆ.
3.20 ಕೋಟಿಗೆ ಡೀಲ್:
ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಪ್ರಶ್ನೆ ಪತ್ರಿಕೆಯನ್ನು ಪೆನ್ಡ್ರೈವ್ನಲ್ಲಿ ನಕಲು ಮಾಡಿ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ನೀಡಿದ್ದರು. ಬಸವರಾಜ್ ಪರೀಕ್ಷೆಯ ಹಿಂದಿನ ದಿನ ಬೆಂಗಳೂರು ಹೊರವಲಯದ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದು, ಅಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಪ್ರಿಂಟ್ಔಟ್ ತೋರಿಸಿ, ಬಳಿಕ ಸಾಕ್ಷ್ಯ ನಾಶಪಡಿಸಲು ಪೆನ್ಡ್ರೈವ್ ಅನ್ನು ಸುಟ್ಟು ಹಾಕಿದ್ದರು. ಈ ಡೀಲ್ಗಾಗಿ 10 ಅಭ್ಯರ್ಥಿಗಳಿಂದ ಒಟ್ಟು 3.20 ಕೋಟಿ ಬೇಡಿಕೆಯಿಡಲಾಗಿದ್ದು, ಈ ಪೈಕಿ 1.52 ಕೋಟಿ (92 ಲಕ್ಷ ಬ್ಯಾಂಕ್ ಖಾತೆಗೆ ಹಾಗೂ 60 ಲಕ್ಷ ರೂ. ನಗದು) ವಸೂಲಿ ಮಾಡಿರುವ ದಾಖಲೆ ಪತ್ತೆಯಾಗಿದೆ. ಬಾಕಿ ಹಣಕ್ಕೆ ಭದ್ರತೆಯಾಗಿ ಖಾಲಿ ಚೆಕ್ ಮತ್ತು ಪ್ರಾಮಿಸರಿ ನೋಟ್ ಪಡೆಯಲಾಗಿತ್ತು.
ಕಾರಿನಲ್ಲೇ ಲಂಚ
ಮಾಜಿ ಅಧ್ಯಕ್ಷ ಸಾಹುಕಾರ್ ಸೂಚನೆಯಂತೆ ಗಂಗ್ವಾರ್ ಅವರು 6 ಅಭ್ಯರ್ಥಿಗಳ ಸರಿಯಾದ ಉತ್ತರಗಳ ಕೀಯನ್ನು ಸದಸ್ಯೆ ಗೀತಾ ಅವರಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ತಮಗೆ ಬೇಕಾದ ಅಭ್ಯರ್ಥಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚು ಅಂಕ ಕೊಡಿಸುವ ಭರವಸೆಯನ್ನು ಗಂಗ್ವಾರ್ ಪಡೆದಿದ್ದರು. ಈ ವ್ಯವಹಾರದಲ್ಲಿ ಸಾಹುಕಾರ್ ಒಬ್ಬ ಅಭ್ಯರ್ಥಿಯಿಂದ 10 ಲಕ್ಷ ರೂ. ಹಾಗೂ ಗೀತಾ ಅವರು ಜನವರಿ 8ರಂದು ತಮ್ಮ ಕಾರಿನಲ್ಲೇ ಮತ್ತೊಬ್ಬ ಅಭ್ಯರ್ಥಿಯಿಂದ 20 ಲಕ್ಷ ರೂ. ನಗದು ಪಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಚಿನ್ನಾಭರಣ, ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ:
ಮಧ್ಯವರ್ತಿ ಬಸವರಾಜ್ನಿಂದ ಪಡೆದ 1.52 ಕೋಟಿ ರೂ.ಅಕ್ರಮ ಹಣದಲ್ಲಿ ಜ್ಞಾನೇಂದ್ರ ಕುಮಾರ್ ತಾವು ಮದುವೆಯಾಗಲಿರುವ ಯುವತಿ ಹೆಸರಿನಲ್ಲಿ ಬರೋಬ್ಬರಿ 52.30 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಖರೀದಿಸಿದ್ದಾರೆ. ಅಲ್ಲದೆ 13.31 ಲಕ್ಷ ರೂ.ಹಣವ ವಿಮಾನ ಪ್ರಯಾಣಕ್ಕಾಗಿ ಖರ್ಚು ಮಾಡಿದ್ದಾರೆ.
ಹಗರಣದ ಮೂಲಕ 4.17 ಕೋಟಿ ರೂ. ಹಣ ಸಂಪಾದಿಸಿರುವ ಶಿವಶಂಕರಪ್ಪ ಸಾಹುಕಾರ್ ಆಗಸ್ಟ್ 2025ರಿಂದ ಡಿಸೆಂಬರ್ 2025ರ ಅವಧಿಯಲ್ಲಿ 3.99 ಕೋಟಿ ರೂ.ನ್ನು ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರ ಬಳಿ ಇಟ್ಟಿದ್ದರು. ಇದಕ್ಕೂ ಮುನ್ನ 8 ರಿಂದ 10 ಕೋಟಿ ರೂ. ಇಟ್ಟಿದ್ದ ಮಾಹಿತಿಯೂ ತನಿಖೆಯಲ್ಲಿ ಲಭ್ಯವಾಗಿದೆ.
ಹಗರಣದಲ್ಲಿ 1.48 ಕೋಟಿ ರೂ. ಹಣ ಗಳಿಸಿರುವ ಗೀತಾ, ಸಾಹುಕಾರ್ ಅವರಿಂದಲೂ ಯಾವುದೇ ಒಪ್ಪಂದವಿಲ್ಲದೆ ಸಾಲದ ಹೆಸರಿನಲ್ಲಿ 1 ಕೋಟಿ ರೂ. ಪಡೆದಿದ್ದಾರೆ. ಈ ಹಣವನ್ನು ತಮ್ಮ ಮತ್ತು ಪುತ್ರಿಯ ಹೆಸರಿನಲ್ಲಿ ರಿಯಲ್ ಎಸ್ಟೇಟ್, ಹಾಗೂ ಶಹಾಪುರದ ಮದ್ರಾಕಿಯಲ್ಲಿ ಶಾಲೆ, ಕನ್ವೆನ್ಷನ್ ಹಾಲ್ ಮತ್ತು ಹೋಟೆಲ್ ನಿರ್ಮಾಣಕ್ಕೆ ಬಳಸಲು ಯೋಜಿಸಿದ್ದರು.
ಬಸವರಾಜ್ ಕನ್ನಾಳೆ 1.52 ಕೋಟಿ ರೂ. ಅಕ್ರಮ ಹಣ ಗಳಿಸಿದ್ದು, ಭಾಲ್ಕಿಯ ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ, ಭಗವತಿ ಎಂಟರ್ಪ್ರೈಸಸ್ ಹಾಗೂ ಸಂಬಂಧಿಕರ ಖಾತೆಗಳ ಮೂಲಕ ಹಣವನ್ನು ವರ್ಗಾಯಿಸಿ ಜಮೀನು ಖರೀದಿಸಿದ್ದಾರೆ.
ಆಸ್ತಿ ಜಪ್ತಿ, ತನಿಖೆ ಮುಂದುವರಿಕೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು 37 ಕಡೆಗಳಲ್ಲಿ ಶೋಧ ನಡೆಸಿದ್ದು, ಸೆಪ್ಟೆಂಬರ್ 17ರಂದು ಬಸವರಾಜ್, ಸೆಪ್ಟೆಂಬರ್ 18ರಂದು ಗಂಗ್ವಾರ್ ಹಾಗೂ ಅಕ್ಟೋಬರ್ 6ರಂದು ಸಾಹುಕಾರ್ ಮತ್ತು ಗೀತಾ ಅವರನ್ನು ಬಂಧಿಸಿದ್ದರು. ಆರೋಪಿಗಳಿಗೆ ಸೇರಿದ 1.22 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಈಗಾಗಲೇ ಜಪ್ತಿ ಮಾಡಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಇತರ ಕೆಪಿಎಸ್ಸಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.
