ಬೆಂಗಳೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ(Hiriyur By-Election) ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್(High Command) ನಿರ್ಧಾರವೇ ಅಂತಿಮವಾಗಿದ್ದು, ಈ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಅಥವಾ ಗೊಂದಲವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್(R Ashok) ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯೂರು ಟಿಕೆಟ್ ಜೆಡಿಎಸ್ಗೆ ಬಿಟ್ಟುಕೊಡಬೇಕು ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದರು. “ನಾವು ಮತ್ತು ಜೆಡಿಎಸ್ ಎನ್ಡಿಎ (NDA) ಮೈತ್ರಿಕೂಟದ ಪಾಲುದಾರರು. ಟಿಕೆಟ್ ಕೇಳುವ ಅಧಿಕಾರ ಅವರಿಗೂ ಇದೆ, ನಮಗೂ ಇದೆ. ಈ ಹಿಂದೆ ಬಿಜೆಪಿ ಇಲ್ಲಿ ಗೆದ್ದಿತ್ತು ಹಾಗೂ ಎರಡನೇ ಸ್ಥಾನವನ್ನೂ ಪಡೆದಿತ್ತು. ಜೆಡಿಎಸ್(JDS) ಕೂಡ ಹಿಂದೆ ಗೆಲುವು ಸಾಧಿಸಿತ್ತು. ಟಿಕೆಟ್ ವಿಚಾರವಾಗಿ ನಾವು ಯಾವುದೇ ಜಗಳ ಮಾಡುವುದಿಲ್ಲ. ಕಳೆದ 15 ವರ್ಷಗಳ ಮತದಾನದ ಅಂಕಿಅಂಶಗಳು ಮತ್ತು ಸಮೀಕ್ಷೆಗಳನ್ನು ಆಧರಿಸಿ, ಸಮನ್ವಯ ಸಭೆಯಲ್ಲಿ ಚರ್ಚಿಸಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಅಶೋಕ್ ತಿಳಿಸಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗುವುದು. ಈ ಮೂಲಕ ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗಳಿಗೆ ಸಿದ್ಧತೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಬೆಲೆ ಏರಿಕೆ ಸರ್ಕಾರ:
ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದ ಆರ್. ಅಶೋಕ್, ಇದೊಂದು ‘ಬೆಲೆ ಏರಿಕೆ ಮತ್ತು ತೆರಿಗೆ ಏರಿಕೆ ಸರ್ಕಾರ’ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಹಾಲು, ಅಡುಗೆ ಎಣ್ಣೆ, ಬಸ್ ಪ್ರಯಾಣ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ನಾನು ಸಚಿವನಾಗಿದ್ದಾಗ ಬಡವರಿಗೆ ಅನುಕೂಲವಾಗುವಂತೆ ಪ್ರತಿ ವರ್ಷ ಆಸ್ತಿ ಮಾರ್ಗಸೂಚಿ ದರವನ್ನು (ಗೈಡ್ಲೈನ್ಸ್ ವ್ಯಾಲ್ಯೂ) ಕಡಿಮೆ ಮಾಡಿದ್ದೆ. ಆದರೆ ಈ ಸರ್ಕಾರ ಪ್ರತಿ ವರ್ಷ ದರ ಏರಿಕೆ ಮಾಡುತ್ತಿದ್ದು, ರಾಜ್ಯದಲ್ಲಿ ಜನರು ಸ್ವಂತ ಮನೆ ಕಟ್ಟಿ ವಾಸಿಸುವುದೇ ಅಪರಾಧ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಆದಾಯವೆಲ್ಲ ತೆರಿಗೆ ಪಾವತಿಗೇ ಹೋಗುತ್ತಿದೆ. ಮೂರು ವರ್ಷಗಳಲ್ಲಿ ಜನರಿಗೆ ತೊಂದರೆ ಕೊಟ್ಟಿದ್ದೇ ಈ ಸರ್ಕಾರದ ಸಾಧನೆಯಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸ್ಥಳೀಯ ಸಂಸ್ಥೆ, ಜಿಬಿಎನಲ್ಲೂ ಗೆಲ್ಲುತ್ತೇವೆ
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿಯ ಕುರಿತು ವ್ಯಂಗ್ಯವಾಡಿದ ಅಶೋಕ್, “ಪರಿಷತ್ ಚುನಾವಣೆಯಲ್ಲಿ ಎನ್ಡಿಎ 4 ಸ್ಥಾನಗಳನ್ನು ಗೆಲ್ಲುವ ಮೂಲಕ ದಿಗ್ವಿಜಯ ಸಾಧಿಸಿದ್ದರೆ, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಪರೀಕ್ಷೆಯಲ್ಲಿ ಶೂನ್ಯ ಅಂಕ ಪಡೆದ ವಿದ್ಯಾರ್ಥಿ ಮನೆಗೆ ಹೋಗುವಂತೆ ಮುಖ್ಯಮಂತ್ರಿಗಳು ಶೂನ್ಯ ಅಂಕಪಟ್ಟಿ ಹಿಡಿದು ದೆಹಲಿಗೆ ಹೋಗಿದ್ದಾರೆ. ಅಲ್ಲಿ ಹೈಕಮಾಂಡ್ ಪೋಷಕರು ಅವರಿಗೆ ಛೀಮಾರಿ ಹಾಕುತ್ತಾರೋ ಅಥವಾ ಏನು ಮಾಡುತ್ತಾರೋ ಕಾದು ನೋಡಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಎನ್ಡಿಎ ಇದೇ ರೀತಿಯ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
