ಫುಕೆಟ್: ಥಾಯ್ಲೆಂಡ್ನ (Thailand) ದಕ್ಷಿಣ ಭಾಗದಲ್ಲಿರುವ ಜನಪ್ರಿಯ ಪ್ರವಾಸಿ ತಾಣ ಫುಕೆಟ್ನಲ್ಲಿ (Phuket) ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ವಾಣಿಜ್ಯ ಕಟ್ಟಡವೊಂದರಲ್ಲಿ (Commercial Shophouse) ಕಾಣಿಸಿಕೊಂಡ ಬೆಂಕಿ ಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದ ಪರಿಣಾಮ, 11 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಬಾಡಿಗೆ ವ್ಯವಹಾರ ನಡೆಸುತ್ತಿದ್ದ ಕಟ್ಟಡದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಸಮೀಪದಲ್ಲಿದ್ದ ಹಲವು ಕಟ್ಟಡಗಳಿಗೂ ವ್ಯಾಪಿಸಿದೆ. ಸೋಮವಾರ ಮುಂಜಾನೆ ಸುಮಾರು 3:17ಕ್ಕೆ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಐಸಿಸಿ ಅಧ್ಯಕ್ಷರಾಗಿ 2ನೇ ಅವಧಿಗೆ ಅವಿರೋಧವಾಗಿ ಜಯ್ ಶಾ ಮರು ನೇಮಕ
ಗಾಯಗೊಂಡ 16 ಮಂದಿಯಲ್ಲಿ 15 ಮಂದಿ ಥಾಯ್ಲೆಂಡ್ ಪ್ರಜೆಗಳಾಗಿದ್ದು, ಓರ್ವ ಮ್ಯಾನ್ಮಾರ್ ಪ್ರಜೆಯಾಗಿದ್ದಾರೆ. ಘಟನೆಯಲ್ಲಿ ಮೃತಪಟ್ಟವರಾಗಲಿ, ಗಾಯಗೊಂಡವರಾಗಲಿ ಪ್ರವಾಸಿಗರಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಮರಣದಂಡನೆ ರದ್ಧತಿ ನಿರ್ಣಯಕ್ಕೆ ಭಾರತದ ವಿರೋಧ
