ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಆಡಳಿತ ಮಂಡಳಿಯು ಭಾನುವಾರ 2035ರವರೆಗಿನ ಪುರುಷರ ಪ್ರಮುಖ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರ ಅನ್ವಯ, ಭಾರತವು 2029ರ ಚಾಂಪಿಯನ್ಸ್ ಟ್ರೋಫಿ(Champions Trophy) ಹಾಗೂ 2031ರ ಏಕದಿನ ವಿಶ್ವಕಪ್(ODI World Cup) ಟೂರ್ನಿಗಳಿಗೆ ಆತಿಥ್ಯ ವಹಿಸಲಿದೆ.
2029ರ ಚಾಂಪಿಯನ್ಸ್ ಟ್ರೋಫಿ ಅಕ್ಟೋಬರ್ 9ರಿಂದ 28ರವರೆಗೆ ಭಾರತದಲ್ಲಿ (India) ನಡೆಯಲಿದೆ. 2006ರ ಬಳಿಕ ಇದೇ ಮೊದಲ ಬಾರಿಗೆ ಭಾರತವು ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ.
2031ರ ಏಕದಿನ ವಿಶ್ವಕಪ್ ಅಕ್ಟೋಬರ್ 9ರಿಂದ ನವೆಂಬರ್ 23ರವರೆಗೆ ನಡೆಯಲಿದ್ದು, ಬಾಂಗ್ಲಾದೇಶದೊಂದಿಗೆ(Bangladesh) ಭಾರತ ಈ ಪ್ರತಿಷ್ಠಿತ ಟೂರ್ನಿಗೆ ಜಂಟಿ ಆತಿಥ್ಯ ವಹಿಸಲಿದೆ.
ಈ ಹಿಂದೆ 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನೂ ಭಾರತವು ಇದೇ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಯಶಸ್ವಿಯಾಗಿ ಆಯೋಜಿಸಿತ್ತು. ಮುಂಬರುವ 2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದು, ಅದು ಕೂಡ ಇದೇ ತಿಂಗಳುಗಳಲ್ಲಿ ಜರುಗಲಿದೆ.
2035ರವರೆಗಿನ ವೇಳಾಪಟ್ಟಿ ಪ್ರಕಟ:
2028ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದ ಹಿಡಿದು 2035ರ ಏಕದಿನ ವಿಶ್ವಕಪ್ವರೆಗಿನ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ದೃಢಪಡಿಸಿದೆ. ಆದರೆ 2031ರ ನಂತರ ನಡೆಯಲಿರುವ ಟೂರ್ನಿಗಳಿಗೆ ಆತಿಥ್ಯ ವಹಿಸುವ ದೇಶಗಳ ಹೆಸರನ್ನು ಸದ್ಯಕ್ಕೆ ಘೋಷಿಸಿಲ್ಲ ಕೇವಲ ದಿನಾಂಕಗಳನ್ನು ಮಾತ್ರ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.
ಐಸಿಸಿ ಪುರುಷರ ಪ್ರಮುಖ ಟೂರ್ನಿಗಳ ವೇಳಾಪಟ್ಟಿ
2028: ಟಿ20 ವಿಶ್ವಕಪ್ — ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ (ಅಕ್ಟೋಬರ್ 12 – ನವೆಂಬರ್ 12)
2029: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ — ಇಂಗ್ಲೆಂಡ್ (ಜೂನ್ 8 – 12)
2029: ಚಾಂಪಿಯನ್ಸ್ ಟ್ರೋಫಿ — ಭಾರತ (ಅಕ್ಟೋಬರ್ 9 – 28)
2030: ಟಿ20 ವಿಶ್ವಕಪ್ — ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ (ಜುಲೈ 4 – ಆಗಸ್ಟ್ 4)
2031: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ — ಇಂಗ್ಲೆಂಡ್ (ಜೂನ್ 12 – 16)
2031: ಏಕದಿನ ಕ್ರಿಕೆಟ್ ವಿಶ್ವಕಪ್ — ಭಾರತ ಮತ್ತು ಬಾಂಗ್ಲಾದೇಶ (ಅಕ್ಟೋಬರ್ 9 – ನವೆಂಬರ್ 23)
