– ಉತ್ತರ ಅಮೆರಿಕದಲ್ಲಿ ಶಾರುಖ್ ದಾಖಲೆ ಉಡೀಸ್
ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ರಾಮಾಯಣ ಭಾಗ-1 (Ramayana Part 1) ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಇದೀಗ ತನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗಿದೆ. 2027ರ ಮೊದಲ ತ್ರೈಮಾಸಿಕದಲ್ಲಿ ಈ ಚಿತ್ರವು ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ರಷ್ಯಾದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಈ ಹಿಂದೆ 2017ರಲ್ಲಿ ನಿತೇಶ್ ತಿವಾರಿ ನಿರ್ದೇಶನದ, ಆಮಿರ್ ಖಾನ್ ನಟನೆಯ ‘ದಂಗಲ್’ ಚಿತ್ರವು ಚೀನಾದಲ್ಲಿ ಸುಮಾರು 1,305 ಕೋಟಿ ರೂಪಾಯಿ ಗಳಿಸಿ ಐತಿಹಾಸಿಕ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಚೀನಾದ ಕಲೆಕ್ಷನ್ನಿಂದ ದಂಗಲ್ ಅತಿ ಹೆಚ್ಚು ಕಲೆಕ್ಷನ್( 2,070 ಕೋಟಿ ರೂ.) ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಇದೀಗ ರಣಬೀರ್ ಕಪೂರ್ (ಶ್ರೀರಾಮ), ರಾಕಿಂಗ್ ಸ್ಟಾರ್ ಯಶ್ (ರಾವಣ) ಹಾಗೂ ಸಾಯಿ ಪಲ್ಲವಿ (ಸೀತೆ) ಮುಖ್ಯಭೂಮಿಕೆಯಲ್ಲಿರುವ ರಾಮಾಯಣ ಚಿತ್ರವೂ ಚೀನಾ ಸೇರಿದಂತೆ ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ಈ ಕುರಿತು ಸಿನಿ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “2027ರ ಮೊದಲ ತ್ರೈಮಾಸಿಕದಲ್ಲಿ ಚೀನಾ, ರಷ್ಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ‘ರಾಮಾಯಣ’ ಬಿಡುಗಡೆಯಾಗಲಿದೆ. ಈಗಾಗಲೇ ಚೀನಾದಲ್ಲಿ ಸೆನ್ಸಾರ್ ಅನುಮತಿಗಾಗಿ ಚಿತ್ರವನ್ನು ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು, ವಿದೇಶಗಳಲ್ಲಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ (Ramayana: Rise of a Legend) ಎಂಬ ಶೀರ್ಷಿಕೆಯಡಿ ಸಂಕ್ಷಿಪ್ತ ಇಂಗ್ಲಿಷ್ ಆವೃತ್ತಿಯಲ್ಲೂ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.
ಈಗಾಗಲೇ ನ.12 ರಂದು ಹಾಂಗ್ ಕಾಂಗ್ನ ಬ್ರಾಡ್ವೇ ಸಿನಿಮಾಸ್ನಲ್ಲಿ ಚೀನೀ ಮತ್ತು ಇಂಗ್ಲಿಷ್ ಸಬ್ಟೈಟಲ್ಗಳೊಂದಿಗೆ ಹಿಂದಿ ಅವೃತ್ತಿ ಬಿಡುಗಡೆಯಾಗಿದೆ. ನ. 19ರಂದು ಬ್ರೆಜಿಲ್, ಇಟಲಿ, ಉಕ್ರೇನ್ ಮತ್ತು ಹಂಗೇರಿಯಲ್ಲಿ ಚಿತ್ರ ತೆರೆಕಾಣಲಿದೆ. ನ.20ರಂದು ಪೋಲೆಂಡ್ನಲ್ಲಿ ಹಾಗೂ ನ.26ರಂದು ಅರ್ಜೆಂಟೀನಾ, ಮಧ್ಯ ಅಮೆರಿಕ, ಕೊಲಂಬಿಯಾ, ಈಕ್ವೆಡಾರ್, ಪೆರು ಮತ್ತು ಜೆಕಿಯಾದಲ್ಲಿ ಬಿಡುಗಡೆಯಾಗಲಿದೆ.
ಶಾರುಖ್ ದಾಖಲೆ ಬ್ರೇಕ್
ನವೆಂಬರ್ 5ರಂದೇ ಯುಕೆ, ಉತ್ತರ ಅಮೆರಿಕ, ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಿರುವ ‘ರಾಮಾಯಣ’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಬಾಕ್ಸ್ ಆಫೀಸ್ ಗುರು’ ಗಿತೇಶ್ ಪಾಂಡ್ಯ ಅವರ ಮಾಹಿತಿಯಂತೆ, ಉತ್ತರ ಅಮೆರಿಕದ ಬಾಕ್ಸ್ ಆಫೀಸ್ನಲ್ಲಿ 20 ಮಿಲಿಯನ್ ಡಾಲರ್ ಗಡಿ ದಾಟಿರುವ ಈ ಚಿತ್ರ, ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ಯಾವುದೇ ಸಿನಿಮಾದ ಗಳಿಕೆಯನ್ನು ಹಿಂದಿಕ್ಕಿದೆ. ಅಲ್ಲದೆ, ಅಮೆರಿಕ ಮತ್ತು ಕೆನಡಾದಲ್ಲಿ 30 ಮಿಲಿಯನ್ ಡಾಲರ್ ಗಳಿಸಿದ ಮೊದಲ ಭಾರತೀಯ ಸಿನಿಮಾ ಎಂಬ ಇತಿಹಾಸ ನಿರ್ಮಿಸುವ ಹಾದಿಯಲ್ಲಿದೆ.
ಈ ಚಿತ್ರದ ಮೂಲಕ ಕನ್ನಡದ ಸ್ಟಾರ್ ನಟ ಯಶ್ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದರೆ, ಲಕ್ಷ್ಮಣನ ಪಾತ್ರದಲ್ಲಿ ನಟಿಸಿರುವ ರವಿ ದುಬೆ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಅನುಪಮ್ ಖೇರ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಅರುಣ್ ಗೋವಿಲ್, ಇಂದಿರಾ ಕೃಷ್ಣನ್ ಮತ್ತು ಲಾರಾ ದತ್ತಾ ಸೇರಿದಂತೆ ಹಲವು ದಿಗ್ಗಜ ಕಲಾವಿದರು ನಟಿಸಿದ್ದಾರೆ.
