– ಪರೀಕ್ಷಾ ಕೇಂದ್ರಗಳ ಮುಂದೆ ಅಭ್ಯರ್ಥಿಗಳ ಪರದಾಟ
ಬೆಂಗಳೂರು: ಕೆಪಿಎಸ್ಸಿ(KPSC) ಪಶುವೈದ್ಯಕೀಯ ಪರೀಕ್ಷಾ ಅಕ್ರಮ ಪ್ರಕರಣ ಬಯಲಾದ ಬೆನ್ನಲ್ಲೇ, ಇದೇ ಮೊದಲ ಬಾರಿಗೆ ಭಾನುವಾರ ರಾಜ್ಯಾದ್ಯಂತ ‘ಚುನಾವಣಾ ಮಾದರಿ’ಯ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಕೆಎಎಸ್ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್(Gazetted Probationers Exam) ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 319 ಹುದ್ದೆಗಳ ನೇಮಕಾತಿಗಾಗಿ ನಡೆದ ಈ ಪರೀಕ್ಷೆಗೆ 1.47 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ 63 ಕೇಂದ್ರಗಳು ಸೇರಿದಂತೆ ರಾಜ್ಯದ 15 ಜಿಲ್ಲೆಗಳ ಒಟ್ಟು 345 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-1 (ಸಾಮಾನ್ಯ ಅಧ್ಯಯನ ಮತ್ತು ಮಾನವಿಕ ವಿಷಯಗಳು) ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಪತ್ರಿಕೆ-2 (ರಾಜ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಅಧ್ಯಯನ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ) ಪರೀಕ್ಷೆಗಳು ಜರುಗಿದವು.
ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಕೆಪಿಎಸ್ಸಿ ಕಠಿಣ ವಸ್ತ್ರಸಂಹಿತೆ(Dress Code) ಜಾರಿಗೊಳಿಸಿತ್ತು. ಮಹಿಳೆಯರಿಗೆ ತಾಳಿ, ಮಾಂಗಲ್ಯಸರ, ಕಾಲುಂಗುರ ಹಾಗೂ ಪುರುಷರಿಗೆ ಜನಿವಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಪ್ರತಿಯೊಬ್ಬ ಅಭ್ಯರ್ಥಿಯನ್ನೂ ಮುಖ ಗುರುತು (Face Recognition) ಪರಿಶೀಲನೆ, ಮೆಟಲ್ ಡಿಟೆಕ್ಟರ್ ತಪಾಸಣೆಗೆ ಒಳಪಡಿಸಲಾಯಿತು. ಕಿವಿ, ಕನ್ನಡಕ, ಶರ್ಟ್ ಕಾಲರ್ ಹಾಗೂ ವಾಚ್ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತಲ್ಲದೆ, ಇಎನ್ಟಿ (ENT) ವೈದ್ಯರಿಂದ ಪಂಚೇಂದ್ರಿಯಗಳ ತಪಾಸಣೆ ನಡೆಸಿ ಒಳಬಿಡಲಾಯಿತು. ಪರೀಕ್ಷಾ ಕೊಠಡಿಯೊಳಗೆ ಚಪ್ಪಲಿ, ಶೂ ಹಾಗೂ ಸಾಕ್ಸ್ಗಳಿಗೂ ನಿರ್ಬಂಧ ಹೇರಲಾಗಿತ್ತು.
ಎಲ್ಲೆಲ್ಲಿ ಏನಾಯ್ತು?
ವಸ್ತ್ರಸಂಹಿತೆ ಅರಿಯದೆ ಫುಲ್ ಸ್ಲೀವ್ ಶರ್ಟ್ ಧರಿಸಿ ಬಂದಿದ್ದ ಅನೇಕರು ಪರೀಕ್ಷಾ ಕೇಂದ್ರದ ಮುಂದೆಯೇ ತಮ್ಮ ಶರ್ಟ್ ತೋಳುಗಳನ್ನು ಕತ್ತರಿಸಿಕೊಂಡರು. ಮಲ್ಲೇಶ್ವರಂ ಸರ್ಕಾರಿ ಪದವಿ ಕಾಲೇಜು ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬ ತನ್ನ ತಂದೆಯ ಜೊತೆ ಕೇಂದ್ರದ ಮುಂದೆಯೇ ಶರ್ಟ್ ಬದಲಿಸಿಕೊಂಡರೆ, ಮತ್ತೊಬ್ಬ ಅಭ್ಯರ್ಥಿ ಶರ್ಟ್ ಕತ್ತರಿಸಲು ಒಪ್ಪದೆ ಕೇವಲ ಬನಿಯನ್ನಲ್ಲೇ ಪರೀಕ್ಷಾ ಕೊಠಡಿಗೆ ತೆರಳಿದ ಪ್ರಸಂಗ ನಡೆಯಿತು. ಇನ್ನು ಮಹಿಳಾ ಅಭ್ಯರ್ಥಿಗಳು ಓಲೆ, ಬಳೆಗಳನ್ನು ಬಿಚ್ಚಿಟ್ಟು ಪರೀಕ್ಷೆಗೆ ಹಾಜರಾದರು.
ಸಮಯ ಪಾಲನೆ ಕಡ್ಡಾಯವಾಗಿದ್ದರಿಂದ, ಬೆಂಗಳೂರಿನ ಮಲ್ಲೇಶ್ವರಂ ಕೇಂದ್ರಕ್ಕೆ ತಡವಾಗಿ ಬಂದ ಮೂವರು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಯಿತು.
ಕಲಬುರಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರಕ್ಕೆ ಮಹಿಳಾ ಅಭ್ಯರ್ಥಿಯೊಬ್ಬರು ಕೆಎಎಸ್ ಬದಲಿಗೆ ವಿಲೇಜ್ ಅಕೌಂಟೆಂಟ್ ಪರೀಕ್ಷೆಯ ಹಾಲ್ ಟಿಕೆಟ್ ತಂದು ಗೊಂದಲಕ್ಕೀಡಾದರು. ಬಳಿಕ ಅಧಿಕಾರಿಗಳ ಅನುಮತಿ ಪಡೆದು ಮನೆಗೆ ತೆರಳಿ ಅಸಲಿ ಹಾಲ್ ಟಿಕೆಟ್ ತಂದು ಪರೀಕ್ಷೆ ಬರೆದರು. ಇದೇ ಕೇಂದ್ರಕ್ಕೆ ಸ್ವಲ್ಪ ತಡವಾಗಿ ಬಂದ ಯುವತಿಯೊಬ್ಬಳು ಬಾಗಿಲು ಹಾಕಿದ್ದನ್ನು ಕಂಡು ಕಣ್ಣೀರಿಟ್ಟು ಗೋಳಾಡಿದಾಗ, ಅಧಿಕಾರಿಗಳು ಮಾನವೀಯತೆ ಮೆರೆದು ಆಕೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು.
ದಾವಣಗೆರೆಯ ಸರ್ಕಾರಿ ಪಿಯು ಕಾಲೇಜು ಕೇಂದ್ರದಲ್ಲಿ ಇಬ್ಬರು ಅಂಧ ಅಭ್ಯರ್ಥಿಗಳಾದ ಸುನೀಲ್ ಪಿ. ಮತ್ತು ಅವರ ಸಹೋದರಿ ಅಶ್ವಿನಿ ಪಿ. ಸಹಾಯಕರ ನೆರವಿನೊಂದಿಗೆ ಪರೀಕ್ಷೆ ಬರೆದು ಗಮನ ಸೆಳೆದರು. “ನಮ್ಮ ಇಡೀ ಕುಟುಂಬವೇ ಅಂಧರ ಕುಟುಂಬವಾಗಿದೆ” ಎಂದು ಸುನೀಲ್ ಪಿ. ಈ ಸಂದರ್ಭದಲ್ಲಿ ಮಾಹಿತಿ ಹಂಚಿಕೊಂಡರು.
