* 200ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿ ಆರೋಪಿಯ ಬಂಧನ
ಬೆಂಗಳೂರು: ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋದಳೆಂಬ ಕಾರಣಕ್ಕೆ ಪತಿ ಸ್ಕ್ರಾಪ್ ಗೋಡೌನ್ಗಳಿಗೆ ಬೆಂಕಿ ಇಟ್ಟ ಪರಿಣಾಮ ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಜೀವನ್ ರಾಜ್ ಮೂಲತಃ ತಮಿಳುನಾಡಿನ ಡೆಂಕಣಿಕೋಟೆ ನಿವಾಸಿ. ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ವಾಸವಿದ್ದ ಈತ ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದ. ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಜೀವನ್ ರಾಜ್, ಪತ್ನಿ ಹಾಗೂ ಮಗನೊಂದಿಗೆ ಸಂಸಾರ ನಡೆಸುತ್ತಿದ್ದ. ಆದರೆ, ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿತ್ತು. ಜಗಳ ವಿಕೋಪಕ್ಕೆ ಹೋಗಿ ಪತ್ನಿ ಗಂಡನನ್ನು ಬಿಟ್ಟು ಮಗನೊಂದಿಗೆ ತವರು ಮನೆ ಸೇರಿದ್ದಳು.
ಇದರಿಂದ ಕೆರಳಿದ್ದ ಜೀವನ್ ರಾಜ್, ಪತ್ನಿಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಳ್ಳಲು ಶುರುಮಾಡಿದ್ದ. ಪತ್ನಿ ಮನೆ ಬಿಟ್ಟು ಹೋದಳೆಂಬ ಸಿಟ್ಟಿಗೆ ಸ್ಕ್ರಾಪ್ ಗೋಡೌನ್ಗಳೇ ಈತನ ಟಾರ್ಗೆಟ್ ಆಗಿದ್ದವು. ಕಳೆದ ತಿಂಗಳ 22 ರಂದು ಅತ್ತಿಬೆಲೆ, ಆನೇಕಲ್ ಹಾಗೂ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿದ್ದ ಸ್ಕ್ರಾಪ್ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದ. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳೆಂಟು ಸ್ಕ್ರಾಪ್ ಅಂಗಡಿಗಳು ಈತನ ಕೃತ್ಯಕ್ಕೆ ಆಹುತಿಯಾಗಿದ್ದವು. ಬೆಂಕಿ ಹಚ್ಚಿ ಪರಾರಿಯಾಗುವ ಬದಲು ಅಲ್ಲೇ ನಿಂತು ಬೆಂಕಿ ಹೊತ್ತಿ ಉರಿಯುವುದನ್ನು ನೋಡುತ್ತಿದ್ದ ಈತ, ತನ್ನ ಕೃತ್ಯವನ್ನು ಮೊಬೈಲ್ನಲ್ಲಿ ವೀಡಿಯೊ ಕೂಡ ಮಾಡಿಕೊಳ್ಳುತ್ತಿದ್ದ. ಸ್ಕ್ರಾಪ್ ಅಂಗಡಿಯಲ್ಲಿ ಮಲಗಿದ್ದ ಮಣಿಕಂಠ ಎಂಬಾತ ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ನರಳಾಡಿದ್ದಾನೆ. ಮಣಿಕಂಠನ ನರಳಾಟವನ್ನು ಕಂಡು ಆರೋಪಿ ವಿಕೃತ ಸಂತೋಷ ಪಟ್ಟಿದ್ದ ಎನ್ನಲಾಗಿದೆ. ಸ್ಥಳೀಯರು ತಕ್ಷಣ ಮಣಿಕಂಠನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಪಲಿಸದೇ ಸಾವನ್ನಪ್ಪಿದ್ದಾನೆ.
ಸಾಲು ಸಾಲು ಸ್ಕ್ರಾಪ್ ಗೋಡೌನ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಆಕಸ್ಮಿಕ ಅಗ್ನಿ ಅವಘಡ ಎಂದು ಭಾವಿಸಲಾಗಿತ್ತು. ಆದರೆ, ಒಂದೇ ಮಾದರಿಯಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಇದು ಆಕಸ್ಮಿಕವಲ್ಲ, ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುತ್ತಿದ್ದಾರೆ ಎಂಬ ಶಂಕೆ ಬಲವಾಗಿತ್ತು. ಹೀಗಾಗಿ, ಪ್ರಕರಣದ ಬೆನ್ನತ್ತಿದ ಅತ್ತಿಬೆಲೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆಗೆ ಇಳಿದಿತ್ತು.
ಆರೋಪಿ ಪತ್ತೆಗೆ ಪೊಲೀಸರು ಬರೋಬ್ಬರಿ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದರು. ಆಗ ಸ್ಕ್ರಾಪ್ ಅಂಗಡಿಗಳ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ದೃಶ್ಯ ಸೆರೆಯಾಗಿತ್ತು. ಅಷ್ಟೇ ಅಲ್ಲ, ಆಸ್ಪತ್ರೆ ಬಳಿ ಜರ್ಕಿನ್ ಬದಲಾಯಿಸಿಕೊಂಡು ಹೋಗುತ್ತಿದ್ದ ದೃಶ್ಯವೂ ಪೊಲೀಸರಿಗೆ ಸಿಕ್ಕಿತ್ತು. ಸಿಟಿ-100 ಬೈಕ್ನಲ್ಲಿ ಓಡಾಡುತ್ತಿದ್ದ ವ್ಯಕ್ತಿಯ ಸುಳಿವು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕಳೆದ ಹದಿನೈದು ದಿನಗಳಿಂದ ಹಗಲು ರಾತ್ರಿ ಎನ್ನದೆ ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು, ಸ್ಕ್ರಾಪ್ ಅಂಗಡಿಗಳ ಸುತ್ತಲೂ ನಿಗಾ ಇಟ್ಟಿದ್ದರು. ಕೊನೆಗೂ ಜೀವನ್ ರಾಜ್ ಸಿಕ್ಕಿಬಿದ್ದಿದ್ದ. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೊರಬಂದ ಸತ್ಯ ಪೊಲೀಸರನ್ನೇ ಬೆಚ್ಚಿಬೀಳಿಸಿತ್ತು. ಪತ್ನಿ ತನ್ನನ್ನು ಬಿಟ್ಟು ತವರು ಮನೆಗೆ ಹೋಗಿದ್ದಾಳೆಂಬ ಕೋಪಕ್ಕೆ ಸಾಲು ಸಾಲು ಸ್ಕ್ರಾಪ್ ಗೋಡೌನ್ಗಳಿಗೆ ಬೆಂಕಿ ಹಚ್ಚಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
