ರಾಮನಗರ: ವಾರಾಂತ್ಯದ ಹಿನ್ನೆಲೆ ಟ್ರೆಕ್ಕಿಂಗ್ಗೆ (Trekking) ಬಂದು ದಾರಿ ತಪ್ಪಿದ್ದ ಒಡಿಶಾ ಮೂಲದ ಯೂಟ್ಯೂಬರ್ರನ್ನು (Youtuber) ರೋಪ್ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ರಾಮನಗರ (Ramanagara) ತಾಲೂಕಿನ ಹುಣಸನಹಳ್ಳಿ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ (Hanumantharayaswamy Betta) ನಡೆದಿದೆ.
ಒಡಿಶಾ ಮೂಲದ ಬಿಸ್ವಾಜಿತ್ ನಾಥ್ ದಾರಿ ತಪ್ಪಿದ ಯೂಟ್ಯೂಬರ್. ಇಂದು ಬೆಳಿಗ್ಗೆ ಬೈಕ್ನಲ್ಲಿ ಒಬ್ಬರೇ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಬಂದಿದ್ದ ಬಿಸ್ವಾಜಿತ್, ಸಾಹಸಮಯ ಟ್ರೆಕ್ಕಿಂಗ್ಗೆಂದು ಬೆಟ್ಟದ ಮೇಲಕ್ಕೆ ತೆರಳಿದ್ದರು. ಆದರೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಾಗಿದ ಅತನಿಗೆ ವಾಪಸ್ ಕೆಳಗಿಳಿಯುವ ದಾರಿ ಕಾಣದೆ ಗೊಂದಲಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಸಮಯಪ್ರಜ್ಞೆ ಮೆರೆದ ಬಿಸ್ವಾಜಿತ್ ನಾಥ್, ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ತಮ್ಮ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮನೆ ಎದುರು ಮಲಗಿದ್ದ ನಾಯಿಯನ್ನು ಎಳೆದೊಯ್ದ ಚಿರತೆ – ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಮಾಹಿತಿ ತಿಳಿಯುತ್ತಿದ್ದಂತೆಯೇ ರಾಮನಗರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಬೆಟ್ಟದ ತಪ್ಪಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಯೂಟ್ಯೂಬರ್ ಪತ್ತೆಯಾಗಿದ್ದಾರೆ. ಕೇವಲ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬಿಸ್ವಾಜಿತ್ ನಾಥ್ರನ್ನು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಬಳಿಕ ರೋಪ್ ಸಹಾಯದಿಂದ ರಕ್ಷಣೆ ಮಾಡಿ ಬೆಟ್ಟದಿಂದ ಇಳಿಸಿದ್ದಾರೆ. ಒಬ್ಬನೇ ಟ್ರಕ್ಕಿಂಗ್ ಬರುವುದು ಸರಿಯಲ್ಲ ಎಂದು ಪೊಲೀಸರು ಬುದ್ಧಿಮಾತು ಹೇಳಿದ್ದಾರೆ. ಇದನ್ನೂ ಓದಿ: ಮದುವೆ ಮುಗಿಸಿ ಹೋಗುವಾಗ ಬೈಕಿಗೆ KSRTC ಬಸ್ ಡಿಕ್ಕಿ – ಇಬ್ಬರು ಯುವಕರು ದುರ್ಮರಣ
ಬಳಿಕ ಮಾತನಾಡಿದ ಯೂಟ್ಯೂಬರ್, ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಬಂದಿದ್ದೆ. 1 ಕಿ.ಮೀ ದೂರದ ಬಳಿ ನಾನು ದಾರಿ ತಪ್ಪಿಸಿಕೊಂಡೆ. ನಾನು ಸಿಲುಕಿಕೊಂಡ ಸ್ಥಳದಿಂದ ನಾನೇ ರಕ್ಷಣೆಗೆ ಮುಂದಾಗಿದ್ದರೆ ನಾನು ಜೀವಂತ ಇರುತ್ತಿರಲಿಲ್ಲ. ನನ್ನ ಜೊತೆ ಸತತವಾಗಿ ಆಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳೀಯರು ಸಂಪರ್ಕದಲ್ಲಿದ್ದರು. ಅವರ ಸಹಕಾರ ಹಾಗೂ ಸಹಾಯದಿಂದ ನಾನು ಜೀವಂತ ಬಂದಿದ್ದೇನೆ ಎಂದು ಕರ್ನಾಟಕ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಹಾವೇರಿ | ಸರ್ಕಾರಿ ಲೇಡಿಸ್ ಹಾಸ್ಟೆಲ್ ಬಳಿ ಕಾಮುಕನ ಕಾಟ; ರಕ್ಷಣೆಗಾಗಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ
