ಅನಿಲ್ ಶೆಟ್ಟಿ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾಗೂ ‘ಸಿಂಪಲ್’ ಸುನಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಲಂಬೋದರ 2.0’ ಚಿತ್ರದ ಗ್ರ್ಯಾಂಡ್ ರೆಡ್ ಕಾರ್ಪೆಟ್ ಪ್ರದರ್ಶನ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಬ್ರಿಗೇಡ್ ರಸ್ತೆಯ ಫೋರಂ ರೆಕ್ಸ್ ವಾಕ್ನ ಪಿವಿಆರ್ ಡೈರೆಕ್ಟರ್ಸ್ ಕಟ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್, ಬಾಲಿವುಡ್ ತಾರೆಯರ ಜೊತೆಗೆ ದೇಶ-ವಿದೇಶಗಳ ಉದ್ಯಮಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
ಬಾಲಿವುಡ್ ತಾರೆಯರ ಉಪಸ್ಥಿತಿ
ಚಿತ್ರದಲ್ಲಿ ಖಳನಾಯಕ ರಾಘವ್ ಕಶ್ಯಪ್ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಕುನಾಲ್ ಕಪೂರ್ ವಿಶೇಷವಾಗಿ ಬೆಂಗಳೂರಿಗೆ ಆಗಮಿಸಿ ಪ್ರದರ್ಶನದಲ್ಲಿ ಪಾಲ್ಗೊಂಡರು. ಹಿರಿಯ ನಟ ಸುನಿಲ್ ಶೆಟ್ಟಿ ಕೂಡ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡು ಅನಿಲ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಯಾಂಡಲ್ವುಡ್ ಕಲಾವಿದರ ಸಮಾಗಮ
ನಟರಾದ ಶ್ರೀಮುರಳಿ, ನಿಶ್ವಿಕಾ ನಾಯ್ಡು, ಶಾನ್ವಿ ಶ್ರೀವಾಸ್ತವ, ಮೇಘನಾ ಗಾಂವ್ಕರ್, ಶುಭ್ರಾ ಅಯ್ಯಪ್ಪ, ಐಶ್ವರ್ಯಾ ನಾಗ್, ಕಾರ್ತಿಕ್ ಮಹೇಶ್, ಕಿಶನ್ ಬಿಳಗಲಿ, ನಿರೂಪಕಿ ಚೈತ್ರಾ ವಾಸುದೇವನ್ ಸೇರಿದಂತೆ ಹಲವು ಕಲಾವಿದರು ಚಿತ್ರವನ್ನು ವೀಕ್ಷಿಸಿದರು. ರಾಜಕಾರಣಿ ಹಾಗೂ ಉದ್ಯಮಿ ಮೊಹಮ್ಮದ್ ನಲಪಾಡ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಾಗತಿಕ ಉದ್ಯಮಿಗಳ ಉಪಸ್ಥಿತಿ ವಿಶೇಷ
ಈ ಕಾರ್ಯಕ್ರಮಕ್ಕೆ ಕಾರ್ಪೊರೇಟ್ ಮತ್ತು ಜಾಗತಿಕ ವಲಯದ ಗಣ್ಯರು ಆಗಮಿಸಿದ್ದು ವಿಶೇಷವಾಗಿತ್ತು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ಜಿ, ಲಂಡನ್ ಮೂಲದ ಇಂಡಿಯಾ ಗ್ಲೋಬಲ್ ಫೋರಮ್ ಸ್ಥಾಪಕ ಪ್ರೊ. ಮನೋಜ್ ಲಾಡ್ವಾ ಹಾಗೂ ಬೆಂಗಳೂರಿನ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್ಮನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಎಐ ತಂತ್ರಜ್ಞಾನದ ಸುತ್ತ ಹೆಣೆದ ಕಥೆ
ಮಹಾವೀರ್ ಜೈನ್ ಫಿಲ್ಮ್ಸ್ ಅರ್ಪಿಸಿರುವ ಈ ಚಿತ್ರವನ್ನು ‘ಮಾಸ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಅನಿಲ್ ಶೆಟ್ಟಿ ನಿರ್ಮಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI), ಅಲ್ಗಾರಿದಮ್ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಮನುಷ್ಯನ ದೈನಂದಿನ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಅನಿಲ್ ಶೆಟ್ಟಿ, ಕುನಾಲ್ ಕಪೂರ್ ಹಾಗೂ ಸಾಚಿ ಬಿಂದ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಜಿಯಾ’ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿರುವ ‘ಲಂಬೋದರ 2.0’, ತನ್ನ ವಿಭಿನ್ನ ಕಥಾವಸ್ತುವಿನಿಂದ ಗಮನ ಸೆಳೆಯುತ್ತಿದೆ.
