ಕೋಲ್ಕತ್ತಾ: ಪ್ರೇಮ ಸಂಬಂಧ ಮುರಿದುಬಿದ್ದ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಮಾಜಿ ಲಿವ್-ಇನ್ ಗೆಳತಿಗೆ (Live In Partner) ಸೇರಿದ ಎರಡು ಸಾಕು ನಾಯಿಗಳನ್ನ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಕೋಲ್ಕತ್ತಾದ (Kolkata) ಜಾದವ್ಪುರ ಪ್ರದೇಶದ ಬಿಕ್ರಮ್ಗಢದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಆರೋಪಿಯನ್ನು ಸಂಜೀಬ್ ಭಟ್ಟಾಚಾರ್ಯ ಎಂದು ಗುರುತಿಸಲಾಗಿದ್ದು, ಈತ ತನ್ನ ಲಿವ್-ಇನ್ ಗೆಳತಿ ಡಿಜೆ ಪಾರಿ ನೋವಾ ಅವರೊಂದಿಗೆ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಇತ್ತೀಚೆಗೆ ಪಾರಿ ನೋವಾ ಸಂಜೀಬ್ ಜೊತೆಗೆ ಬ್ರೇಕಪ್ ಮಾಡಿಕೊಂಡು ಫ್ಲ್ಯಾಟ್ನಿಂದ ಹೊರಬಂದಿದ್ದರು. ಆದರೆ ತಮ್ಮ ಸಾಕು ನಾಯಿಗಳನ್ನು (Pet Dogs) ಅಲ್ಲೇ ಬಿಟ್ಟು ತೆರಳಿದ್ದರು. ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಕೋಪಗೊಂಡಿದ್ದ ಸಂಜೀಬ್, ತನ್ನ ಮಾಜಿ ಗೆಳತಿಗೆ ವಿಡಿಯೋ ಕಾಲ್ ಮಾಡಿ, ಸಾಕು ನಾಯಿಯ ಕುತ್ತಿಗೆಗೆ ನೇಣು ಬಿಗಿದು ತೋರಿಸಿದ್ದಾನೆ. ಮತ್ತೊಂದು ನಾಯಿಯನ್ನ ಹತ್ಯೆ ಮಾಡಿ ವಿಡಿಯೋ ಕಾಲ್ನಲ್ಲೇ ತೋರಿಸಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಬ್ರೇಕಪ್ ಮಾಡಿಕೊಂಡ ಬಲಿಕ ಎರಡೂ ಸಾಕು ನಾಯಿಗಳನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಾದವ್ಪುರ ಪೊಲೀಸರು ಫ್ಲ್ಯಾಟ್ನಿಂದ ಸಂಜೀಬ್ ಭಟ್ಟಾಚಾರ್ಯನನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

