ಮುಂಬೈ: ಪುಣೆಯಿಂದ (Pune) ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ (IndiGo Flight) ಲ್ಯಾಂಡಿಂಗ್ ಗೇರ್ ಟೇಕಾಫ್ ಬಳಿಕ ಮಡಚಿಕೊಳ್ಳದೇ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನವನ್ನು ಪುಣೆ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿದ್ದಾರೆ.
6 E 623 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಾಂತ್ರಿಕ ದೋಷ ಗಮನಕ್ಕೆ ಬರುತ್ತಿದ್ದಂತೆ ಪೈಲಟ್ ಎಟಿಸಿಗೆ ಮಾಹಿತಿ ನೀಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಪುಣೆ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.
ಲ್ಯಾಂಡಿಂಗ್ಗೂ ಮುನ್ನ ರನ್ವೇ ಮೇಲೆ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಲ್ಯಾಂಡಿಂಗ್ ಗೇರ್ ಪರಿಶೀಲನೆ ಮಾಡಲಾಯಿತು. ಬೆಳಗ್ಗೆ 9:04ಕ್ಕೆ ಸುರಕ್ಷಿತವಾಗಿ ವಿಮಾನವನ್ನು ಇಳಿಸಲಾಯಿತು. ವಿಮಾನ ಲ್ಯಾಂಡ್ ಮಾಡುವ ವೇಳೆ, ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಬಳಿಕ 9:10ಕ್ಕೆ ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆಯಲಾಯಿತು.
ವಿಮಾನದಲ್ಲಿದ್ದ 193 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರಿಗಾಗಿ ಬೆಂಗಳೂರಿನಿಂದ ಪರ್ಯಾಯ ವಿಮಾನ ವ್ಯವಸ್ಥೆಗೆ ಇಂಡಿಗೋ ಸಂಸ್ಥೆ ಸಿದ್ಧತೆ ಮಾಡುತ್ತಿದೆ.
