– ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ವಿಶೇಷ ಸೂಚನೆ
ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಕರಡು ಮತದಾರರ ಪಟ್ಟಿಯಿಂದ (Loters List) ಹೆಸರು ಕೈಬಿಟ್ಟಿದ್ದರೂ, ಈ ಹಿಂದೆ ಮತದಾರರಾಗಿ ನೋಂದಣಿಯಾಗಿದ್ದ ಅರ್ಹರು ಮತ್ತೆ ಹೊಸದಾಗಿ ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿದಾರರ ವಿರುದ್ಧ ಯಾವುದೇ ಕಾನೂನು ಕ್ರಮ ಅಥವಾ ಪ್ರಾಸಿಕ್ಯೂಷನ್ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗವು (Election Commission) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಈ ಕುರಿತು ಸುಪ್ರೀಂ ಕೋರ್ಟ್ಗೆ (Supreme Court) ಸಲ್ಲಿಸಿರುವ ಅಫಿಡವಿಟ್ನಲ್ಲಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅಲ್ಲದೇ, ಈ ಮಾಹಿತಿಯನ್ನು ಮತದಾರರಿಗೆ ತಲುಪಿಸಲು ಸ್ಥಳೀಯ ಭಾಷೆಗಳಲ್ಲಿಯೂ ವ್ಯಾಪಕ ಪ್ರಚಾರ ಮಾಡುವಂತೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ (CEO) ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.
ಫಾರ್ಮ್-6 ಸಲ್ಲಿಸಿದ್ರೆ ಪ್ರಾಸಿಕ್ಯೂಷನ್ ಇಲ್ಲ
ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದವರು SIR ಪ್ರಕ್ರಿಯೆಯ ಸಂದರ್ಭದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸದ ಕಾರಣ ಮತ್ತೆ ಫಾರ್ಮ್-6 ಮೂಲಕ ಮತ್ತೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಅರ್ಜಿ ಸಲ್ಲಿಸಿರುವವರು ʻಜನಪ್ರತಿನಿಧಿಗಳ ಕಾಯ್ದೆ-1950ರ ಸೆಕ್ಷನ್ 31ʼರ ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದ್ರೆ ಈ ಆತಂಕವನ್ನು ನಿವಾರಿಸಲು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
SIR ಪ್ರಕ್ರಿಯೆಗೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರೂ, ಪ್ರಸ್ತುತ ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದಿರುವ ಕಾರಣಕ್ಕೆ ಮಾತ್ರ ಫಾರ್ಮ್-6 ಸಲ್ಲಿಸುವ ಅರ್ಜಿದಾರರ ವಿರುದ್ಧ ಯಾವುದೇ ಪ್ರಾಸಿಕ್ಯೂಷನ್ ನಡೆಸುವುದಿಲ್ಲ. ಆದರೆ, ಅರ್ಜಿದಾರರು ಬೇರೆ ಯಾವುದೇ ಲೋಕಸಭಾ ಅಥವಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರಬಾರದು. ಅಲ್ಲದೇ, ಅರ್ಜಿಯಲ್ಲಿ ನೀಡುವ ಘೋಷಣೆಯು ಕಾನೂನುಬದ್ಧವಾಗಿರಬೇಕು ಎಂಬ ಷರತ್ತನ್ನೂ ವಿಧಿಸಿದೆ.
ಮತದಾರರನ್ನು ಸಂಪರ್ಕಿಸಿ ಹೆಸರು ಸೇರ್ಪಡೆಗೆ ಕ್ರಮ
SIR ಪ್ರಕ್ರಿಯೆಯಲ್ಲಿ ASDD (ಗೈರುಹಾಜರು, ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ನಕಲಿ ನೋಂದಣಿ) ವಿಭಾಗದಡಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವವರನ್ನ ಸಂಪರ್ಕಿಸಿ, ಅವರ ಹೆಸರುಗಳನ್ನು ಮತ್ತೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಸಲಹೆಯನ್ನ ಚುನಾವಣಾ ಆಯೋಗ ಪರಿಗಣಿಸಿದೆ.
ಈ ಹಿನ್ನೆಲೆ ನವೆಂಬರ್ 6 SIR ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.
ಮತದಾರರು ತಮ್ಮ ಪ್ರಸ್ತುತ ಸಾಮಾನ್ಯ ವಾಸಸ್ಥಳಕ್ಕೆ ಸಂಬಂಧಿಸಿದಂತೆ ಭರ್ತಿ ಮಾಡಿದ ಎನ್ಯೂಮರೇಷನ್ ಫಾರ್ಮ್ (ಅನುಬಂಧ-A) ಅನ್ನು ಚುನಾವಣಾ ನೋಂದಣಾಧಿಕಾರಿ (ERO), ಸಹಾಯಕ ಚುನಾವಣಾ ನೋಂದಣಾಧಿಕಾರಿ (AERO) ಅಥವಾ ಬೂತ್ ಮಟ್ಟದ ಅಧಿಕಾರಿ (BLO) ಅವರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಥಳಾಂತರಗೊಳ್ಳದ ಮತದಾರರು ಈ ಹಿಂದೆ ಎನ್ಯೂಮರೇಷನ್ ಫಾರ್ಮ್ ಸಲ್ಲಿಸಲು ಸಾಧ್ಯವಾಗದ ಕಾರಣವನ್ನು ವಿವರಿಸುವ ಅನುಬಂಧ-B ಹೇಳಿಕೆಯೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದು.
ಈ ಅರ್ಜಿಯನ್ನು ಮತದಾರರು ಸ್ವತಃ ಅಥವಾ ಕುಟುಂಬದ ಸದಸ್ಯರ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದು. ಅಲ್ಲದೆ, ಇ-ಸೈನ್ ಸೌಲಭ್ಯದೊಂದಿಗೆ ECINET ಮೂಲಕ ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಅವಕಾಶ ನಿರಾಕರಿಸುವಂತಿಲ್ಲ
ಅಗತ್ಯ ಅರ್ಹತಾ ಮಾನದಂಡಗಳನ್ನ ಪೂರೈಸುವ ಯಾವುದೇ ಅರ್ಹ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳುವ ಅವಕಾಶದಿಂದ ವಂಚಿತರಾಗದಂತೆ ವಿಶೇಷ ವ್ಯವಸ್ಥೆ ರೂಪಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಅದೇ ಸಮಯದಲ್ಲಿ, ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ನೋಂದಣಿಯಾಗುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದೆ.
ಇದಕ್ಕೂ ಮೊದಲು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಚುನಾವಣಾ ಆಯೋಗ ಬಲವಾಗಿ ಸಮರ್ಥಿಸಿಕೊಂಡಿತ್ತು. ಈ ಪ್ರಕ್ರಿಯೆಗೆ ಕಾನೂನಿನ ಮಾನ್ಯತೆ ಇದೆ ಮತ್ತು ಆಯೋಗದ ಮೂವರು ಸದಸ್ಯರು ಸರ್ವಾನುಮತದಿಂದ ಸಂಬಂಧಿತ ಆದೇಶಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿತ್ತು.

