– ಆರಂಭದಲ್ಲೇ ಸೀಟು ಹಂಚಿಕೆ ಪೈಪೋಟಿ ತೀವ್ರ
ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ (UP Assembly Elections) ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (Samajwadi Party) ನಡುವೆ ಸೀಟು ಹಂಚಿಕೆ ಪೈಪೋಟಿ ಆರಂಭದಲ್ಲೇ ತೀವ್ರಗೊಂಡಿದೆ.
ರಾಜ್ಯದ 403 ವಿಧಾನಸಭಾ ಸ್ಥಾನಗಳಲ್ಲಿ 181 ಸ್ಥಾನಗಳಿಗೆ ಕಾಂಗ್ರೆಸ್ (Congress) ಬೇಡಿಕೆ ಇಟ್ಟಿದೆ. ಇದಕ್ಕೆ ಸಮಾಜವಾದಿ ಪಕ್ಷದ ಕೆಲ ನಾಯಕರು ಅಕ್ಷೇಪ ಎತ್ತಿದ್ದಾರೆ. ಎಸ್ಪಿ ಸಂಸದ ಶಿವಪಾಲ್ ಸಿಂಗ್ ಪಟೇಲ್, ಕಾಂಗ್ರೆಸ್ ಬೇಡಿಕೆಯನ್ನು ಅಸಮಂಜಸ ಎಂದು ಕರೆದಿದ್ದು, 100 ಕ್ಕಿಂತ ಕಡಿಮೆ ಸ್ಥಾನಗಳನ್ನಷ್ಟೇ ಬಿಟ್ಟುಕೊಡಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬೇಡಿಕೆಗೆ ಎಸ್ಪಿ ಆಕ್ಷೇಪ
ಸೀಟು ಹಂಚಿಕೆ ವಿಚಾರ ಕುರಿತು ಎಸ್ಪಿ ಸಂಸದ ಶಿವಪಾಲ್ ಸಿಂಗ್ ಪಟೇಲ್ ಮಾತನಾಡಿ, ಕಾಂಗ್ರೆಸ್ ಸ್ಪರ್ಧಿಸಲು ಬಯಸುವ 181 ಕ್ಷೇತ್ರಗಲ ಪಟ್ಟಿಯನ್ನು ಸಲ್ಲಿಸಿದೆ. ಆದರೆ ಸೀಟು ಹಂಚಿಕೆ ವ್ಯವಸ್ಥೆಯನ್ನ ಇನ್ನೂ ಅಂತಿಮಗೊಳಿಸಿಲ್ಲ. ಅಂತಿಮ ನಿರ್ಧಾರವನ್ನ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ತೆಗೆದುಕೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ 50-60 ಸ್ಥಾನಗಳಿಗೆ, ಹೆಚ್ಚೆಂದ್ರೆ 65 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕು. ಏಕೆಂದ್ರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಇಬ್ಬರು ಶಾಸಕರನ್ನ ಮಾತ್ರ ಹೊಂದಿದೆ. ಸಮಾಜವಾಧಿ ಪಕ್ಷವು ಕಾಂಗ್ರೆಸ್ಗಿಂತಲೂ ಪ್ರಬಲವಾಗಿದೆ. ಸದ್ಯದ ಸ್ಥಿತಿಯನ್ನ ನೋಡಿದ್ರೆ, ಕಾಂಗ್ರೆಸ್ 50 ಸ್ಥಾನಗಳಿಗೂ ಅರ್ಹತೆ ಹೊಂದಿಲ್ಲ. ಹೀಗಿರುವಾಗ 181 ಸ್ಥಾನಗಳನ್ನ ಕೇಳೋದು ನ್ಯಾಯಸಮ್ಮತವಲ್ಲ. ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳನ್ನ ನೀಡಿದ್ರೆ ಸಂಪನ್ಮೂಲವೂ ವ್ಯರ್ಥವಾದಂತಾಗಲಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೇ, ಸೀಟು ಹಂಚಿಕೆ ಸೂತ್ರವನ್ನ ನಿರ್ಧಾರ ಮಾಡುವಾಗ, ತಳಮಟ್ಟದ ಕಾರ್ಯಕರ್ತರ ಪ್ರಯತ್ನಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳನ್ನ ಬಿಟ್ಟುಕೊಡುವುದು ಈಗಾಗಲೇ, ‘ಪಿಡಿಎ’ (ಪಿಚ್ಡಾ, ದಲಿತ ಮತ್ತು ಆಲ್ಸಂಖಾಯಕ್) ಪಂಚಾಯತ್ಗಳು ಮತ್ತು ಕಠಿಣ ಕ್ಷೇತ್ರಕಾರ್ಯದ ಮೂಲಕ ರಾಜ್ಯಾದ್ಯಂತ ಸಾರ್ವಜನಿಕ ನಂಬಿಕೆಯನ್ನು ನಿರ್ಮಿಸಿರುವ ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಬೇಸರ ತರಲಿದೆ. ಮೈತ್ರಿಕೂಟಗಳಿಗೆ ಪರಸ್ಪರ ಸಹಕಾರದ ಅಗತ್ಯವಿದ್ದರೂ, ಸಮಂಜಸ ಮಿತಿಗಳನ್ನ ಮೀರುವುದು ಚುನಾವಣಾ ಫಲಿತಾಂಶಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ನವೆಂಬರ್ 17 ರಂದು ಮಾತುಕತೆ
ಸೀಟು ಹಂಚಿಕೆ ಕುರಿತು ಚರ್ಚಿಸಲು ಎರಡೂ ಪಕ್ಷಗಳ ಹಿರಿಯ ನಾಯಕರು ನವೆಂಬರ್ 17 ರಂದು ಸಭೆ ಸೇರಲಿದ್ದಾರೆ. ಈ ಸಭೆಯು ಸೀಟುಗಳ ಸಂಖ್ಯೆ ಮತ್ತು ಮೈತ್ರಿಕೂಟದ ಅಂತಿಮ ಸೂತ್ರವನ್ನ ನಿರ್ಧರಿಸಲು ಔಪಚಾರಿಕ ಮಾತುಕತೆಗಳ ಆರಂಭವನ್ನು ಗುರುತಿಸುತ್ತದೆ.
ಉತ್ತರ ಪ್ರದೇಶದಲ್ಲಿ 1989 ರಿಂದಲೂ ಕಾಂಗ್ರೆಸ್ನ ಚುನಾವಣಾ ಪ್ರದರ್ಶನ ಕುಸಿಯುತ್ತಲೇ ಬಂದಿದೆ. ಆ ವರ್ಷವೇ ಪಕ್ಷವು ಕೊನೆಯ ಬಾರಿಗೆ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಿತ್ತು, ಆದರೆ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. 2017ರಲ್ಲಿ ಪಕ್ಷವು 7 ಸ್ಥಾನಗಳನ್ನು ಗೆದ್ದಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯು ಸಮಾಜವಾದಿ ಪಕ್ಷದ (SP) ಜೊತೆಗಿನ ಮೈತ್ರಿಯ ಬಗ್ಗೆ ಕಾಂಗ್ರೆಸ್ನ ವಿಶ್ವಾಸ ಹೆಚ್ಚಿಸಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷವು 37 ಸ್ಥಾನಗಳನ್ನ ಪಡೆದುಕೊಂಡಿತು. ಇದರ ಪರಿಣಾಮವಾಗಿ ಬಿಜೆಪಿ 33 ಸ್ಥಾನಗಳಿಗೆ ಸೀಮಿತಗೊಂಡಿತು.


