ಭಾರತ ಮತ್ತು ಚೀನಾದ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ, ಬಗೆಹರಿಯದ ಗಡಿ ವಿವಾದದಿಂದ ಹಿಡಿದು ಹೆಚ್ಚುತ್ತಿರುವ ವ್ಯಾಪಾರ ಕೊರತೆಯವರೆಗೆ ಹಲವು ಬಿಕ್ಕಟ್ಟುಗಳಿವೆ. ಇದೀಗ, ಮತ್ತೊಂದು ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ಭಾರಿ ಎಂಜಿನಿಯರಿಂಗ್ ಉಪಕರಣವೊಂದು ಮತ್ತೊಂದು ವಿವಾದದ ಮೂಲವಾಗುವ ಸಾಧ್ಯತೆಯಿದೆ. ಜಾಗತಿಕ ಮಾರಾಟ ಮತ್ತು ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನಾ, ನವೆಂಬರ್ 18 ರಿಂದ ಜಾರಿಗೆ ಬರುವಂತೆ ‘ಟನಲ್ ಬೋರಿಂಗ್ ಮೆಷಿನ್’ಗಳ (TBMs) ಹಾಗೂ ವಿವಿಧ ಬಗೆಯ ಸುರಂಗ ಕೊರೆಯುವ ಯಂತ್ರಗಳ ರಫ್ತಿನ ಮೇಲೆ ನಿರ್ಬಂಧ ಘೋಷಿಸಿದೆ. ಚೀನಾದ ವಾಣಿಜ್ಯ ಸಚಿವಾಲಯವು ಈ ಯಂತ್ರಗಳನ್ನು ‘ದ್ವಿ-ಬಳಕೆಯ ವಸ್ತುಗಳು’ (Dual-Use Items) ಎಂದು ವರ್ಗೀಕರಿಸಿದೆ. ಅಂದರೆ, ಇವುಗಳನ್ನು ನಾಗರಿಕ ಮತ್ತು ಮಿಲಿಟರಿ ಎರಡೂ ಉದ್ದೇಶಗಳಿಗೆ ಬಳಸಬಹುದು. ಚೀನಾವು ಇವುಗಳ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲವಾದರೂ, ಕಠಿಣ ನಿಯಂತ್ರಣಗಳನ್ನು ಜಾರಿಗೆ ತಂದಿದೆ. ಹೆಚ್ಚುವರಿ ಪರವಾನಗಿಗಳು ಮತ್ತು ಅನುಮತಿಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಈ ಹೊಸ ನಿಯಮವು ಸೂಕ್ಷ್ಮ ಪ್ರದೇಶಗಳಿಗೆ ಹಾಗೂ ಚೀನಾದೊಂದಿಗೆ ಪ್ರಾದೇಶಿಕ ವಿವಾದಗಳನ್ನು ಹೊಂದಿರುವ ದೇಶಗಳಿಗೆ (ಭಾರತವೂ ಸೇರಿದಂತೆ) ಅನ್ವಯಿಸುತ್ತದೆ.
ಸುರಂಗ ಕೊರೆಯುವ ಯಂತ್ರಗಳ ಮೇಲೆ ಭಾರತ ಎಷ್ಟು ಅವಲಂಬನೆಯಾಗಿದೆ? ಇವುಗಳ ಜಾಗತಿಕ ರಫ್ತಿನಲ್ಲಿ ಚೀನಾದ ಪಾಬಲ್ಯ ಎಷ್ಟಿದೆ? ಡ್ರ್ಯಾಗನ್ ರಾಷ್ಟ್ರದ ನಿರ್ಬಂಧದಿಂದ ಭಾರತದ ಮೇಲಾಗುವ ಪರಿಣಾಮಗಳೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಚೀನಾದ ಪ್ರಾಬಲ್ಯ
ಜಾಗತಿಕ ಮಟ್ಟದಲ್ಲಿ ಬಳಸಲಾಗುವ ಎಲ್ಲಾ ಬೃಹತ್ ಸುರಂಗ ಕೊರೆಯುವ ಉಪಕರಣಗಳ ಪೈಕಿ ಸುಮಾರು ಶೇಕಡಾ 70ರಷ್ಟನ್ನು ಚೀನಾವೇ ತಯಾರಿಸುತ್ತದೆ. ತಾನು ದೇಶೀಯವಾಗಿ ಬಳಸುವ ಯಂತ್ರಗಳಲ್ಲಿ ಸುಮಾರು 95% ರಷ್ಟನ್ನು ತಾನೇ ತಯಾರಿಸುತ್ತದೆ. ಚೀನಾದಲ್ಲಿ 5,000ಕ್ಕೂ ಹೆಚ್ಚು ಟಿಬಿಎಂ ಯಂತ್ರಗಳ ಸಮೂಹ ಕಾರ್ಯಾಚರಣೆಯಲ್ಲಿದೆ. ಅಲ್ಲದೆ, ‘ಚೀನಾ ರೈಲ್ವೇ ಇಂಜಿನಿಯರಿAಗ್ ಎಕ್ವಿಪ್ಮೆಂಟ್ ಗ್ರೂಪ್’ (CREG) ಮತ್ತು ‘ಚೀನಾ ರೈಲ್ವೇ ಕನ್ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ’ (CRCHI) ಯಂತಹ ಪ್ರಮುಖ ಸರ್ಕಾರಿ ಬೆಂಬಲಿತ ಉದ್ಯಮಗಳ ಮೂಲಕ ಚೀನಾ ಒಟ್ಟು 4,000ಕ್ಕೂ ಹೆಚ್ಚು ಇಂತಹ ಯಂತ್ರಗಳನ್ನು ತಯಾರಿಸಿದೆ. ಚೀನಾದ ತಯಾರಕರು ಅಂತರರಾಷ್ಟ್ರೀಯ ಮಾರಾಟವನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿದ್ದಾರೆ. ಏಷ್ಯಾ, ಯುರೋಪ್ ಮತ್ತು ಅಭಿವೃದ್ಧಿಶೀಲ ಸಾರಿಗೆ ಕಾರಿಡಾರ್ಗಳಲ್ಲಿನ ಯೋಜನೆಗಳಿಗೆ ಸರಬರಾಜುಗಳನ್ನು ಒದಗಿಸುತ್ತಿರುವುದರಿಂದ, ಪ್ರಮುಖ ಭಾರಿ ಕೈಗಾರಿಕಾ ಸಮೂಹಗಳ ವಿದೇಶಿ ಆದಾಯವು ಗಣನೀಯವಾಗಿ ಏರಿಕೆಯಾಗಿದೆ.
ಭಾರತದ ಮೇಲೆ ಪರಿಣಾಮ ಏನು?
ಅಲ್ಪಾವಧಿಯಲ್ಲಿ ಹೊಸ ಯಂತ್ರಗಳನ್ನು ಖರೀದಿಸುವುದಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಈಗಾಗಲೇ ಇರುವ ಯಂತ್ರಗಳಿಗೆ ಬಿಡಿಭಾಗಗಳ ಅಗತ್ಯ ಹೆಚ್ಚಿದೆ. ಈ ನಿರ್ಬಂಧಗಳು ಭಾರತದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು. ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ವೇಗವಾಗಿ ಸಾಗುತ್ತಿದೆ. ಚೀನಾ ಗಡಿಯುದ್ದಕ್ಕೂ ಇರುವ ಪ್ರದೇಶಗಳಲ್ಲಿ ಎಲ್ಲ ರೀತಿಯ ಭೂಪ್ರದೇಶಗಳಿಗೂ ಹೊಂದಿಕೊಳ್ಳುವ ಸುರಂಗಗಳನ್ನು ನಿರ್ಮಿಸುವುದರಿಂದ ಹಿಡಿದು, ಅನೇಕ ನಗರಗಳಲ್ಲಿ ಮೆಟ್ರೋ ಜಾಲಗಳನ್ನು ವಿಸ್ತರಿಸುವುದು, ವೇಗದ ರೈಲು ಮಾರ್ಗಗಳನ್ನು ನಿರ್ಮಿಸುವವರೆಗೆ ವಿವಿಧ ಯೋಜನೆಗಳು ನಡೆಯುತ್ತಿವೆ. ‘ಟನಲ್ ಬೋರಿಂಗ್ ಮಷಿನ್’ (ಸುರಂಗ ಕೊರೆಯುವ ಯಂತ್ರ) ಎಂಬ ಉಪಕರಣವು, ಅತ್ಯಂತ ಗಟ್ಟಿಯಾದ ರಾಸಾಯನಿಕ ಸಂಯುಕ್ತವನ್ನು ಹೊಂದಿರುವ ವೃತ್ತಾಕಾರದ ಉಕ್ಕಿನ ಚಕ್ರದ ಮೂಲಕ ಮಣ್ಣು ಅಥವಾ ಬಂಡೆಗಳನ್ನು ಕೊರೆಯುತ್ತಾ ಸಾಗುತ್ತದೆ. ಅದೇ ಸಮಯದಲ್ಲಿ ಸುರಂಗದ ಒಳಭಾಗಕ್ಕೆ ಕಾಂಕ್ರೀಟ್ ಬ್ಲಾಕ್ಗಳನ್ನು ಜೋಡಿಸುತ್ತಾ ಹೋಗುತ್ತದೆ.
ಈ ಯಂತ್ರವನ್ನು ನಗರಗಳಲ್ಲಿನ ಅಂಡರ್ಗ್ರೌಂಡ್ ಮೆಟ್ರೋ ಮಾರ್ಗಗಳು ಮತ್ತು ಜಲವಿದ್ಯುತ್ ಯೋಜನೆಗಳಿಗಾಗಿ ಸುರಂಗಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಇದರ ಜೊತೆಗೆ, ಆಯಕಟ್ಟಿನ ದೃಷ್ಟಿಯಿಂದ ಪ್ರಮುಖವಾದ ಗಡಿ ಪ್ರದೇಶಗಳಲ್ಲಿ ರಸ್ತೆ ಮತ್ತು ರೈಲ್ವೆ ಸುರಂಗಗಳನ್ನು ಕೊರೆಯಲು ಸಹ ಇದನ್ನು ಬಳಸಲಾಗುತ್ತದೆ. ಪರಿಣಾಮವಾಗಿ, ಯಂತ್ರ ಅಥವಾ ಅದರ ಬಿಡಿಭಾಗಗಳನ್ನು ಪಡೆಯುವಲ್ಲಿ ವಿಳಂಬವಾದರೆ, ಈ ಎಲ್ಲಾ ವಲಯಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚುವರಿ ರಫ್ತು ಅವಶ್ಯಕತೆಗಳು ಯಂತ್ರಗಳು ಮತ್ತು ಬಿಡಿಭಾಗಗಳ ಖರೀದಿಯನ್ನು ನಿಧಾನಗೊಳಿಸಬಹುದು. ಇದು ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳ ವೇಗದ ಮೇಲೆ ಪರಿಣಾಮ ಬೀರಬಹುದು.
ಚೀನಾ ಸಂದೇಶ ರವಾನಿಸಲು ಪ್ರಯತ್ನಿಸುತ್ತಿದೆಯೇ?
ಟಿಬಿಎಂಗಳ ಸ್ವಾಧೀನವು ಹೊಸ ವಿಷಯವೇನಲ್ಲ. ರಫ್ತು ನಿಯಂತ್ರಣಗಳು ಜಾರಿಗೆ ಬರುವ ಮೊದಲೇ, ಈ ಉಪಕರಣಗಳ ಪೂರೈಕೆಯನ್ನು ಸುಗಮಗೊಳಿಸುವ ಕುರಿತು ಭಾರತವು ಚೀನಾದೊಂದಿಗೆ ಪ್ರಸ್ತಾಪಿಸಿತ್ತು. ಮಾತುಕತೆಗಳ ಸಂದರ್ಭದಲ್ಲಿಯೂ ಭಾರತವು ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಲೇ ಬಂದಿದೆ. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ, ಬೀಜಿಂಗ್ ತನ್ನ ರಫ್ತುಗಳ ಮೇಲಿನ ಪರಿಶೀಲನೆಯನ್ನು ಹೆಚ್ಚಿಸಿದೆ. 2024ರಲ್ಲಿ, ಜರ್ಮನ್ ಕಂಪನಿಯೊಂದರಿಂದ ಉಪಕರಣಗಳನ್ನು ಖರೀದಿಸಿದ ನಂತರ (ಆ ಉಪಕರಣಗಳು ಚೀನಾದಲ್ಲಿ ತಯಾರಾಗಿದ್ದವು), ವಿಳಂಬದ ಕುರಿತು ಭಾರತವು ಕಳವಳ ವ್ಯಕ್ತಪಡಿಸಿತ್ತು. ಆದಾಗ್ಯೂ, ಭಾರತ ಮತ್ತು ಚೀನಾಗಳ ನಡುವಿನ ಸಮನ್ವಯದ ನಂತರ ಈ ಸಮಸ್ಯೆಯು ಬಗೆಹರಿಯಿತು. ಚೀನಾದ ಈ ಉಪಕರಣವನ್ನು ‘ದ್ವಿ-ಬಳಕೆಯ’ ವಸ್ತು ಎಂದು ವರ್ಗೀಕರಿಸಿರುವ ಕ್ರಮವು, ಚೀನಾ ಏನಾದರೂ ಸಂದೇಶ ರವಾನಿಸಲು ಪ್ರಯತ್ನಿಸುತ್ತಿದೆಯೇ ಅಥವಾ ಗಡಿಯುದ್ದಕ್ಕೂ ಭಾರತದ ಮೂಲಸೌಕರ್ಯ ಅಭಿವೃದ್ಧಿಯನ್ನು ನಿಧಾನಗೊಳಿಸಲು ಯತ್ನಿಸುತ್ತಿದೆಯೇ ಎಂಬ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಚೀನೀ ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯು ತನ್ನ ಸಂಪಾದಕೀಯವೊಂದರಲ್ಲಿ, ಕೇವಲ ಒಂದು ‘ಟನಲ್ ಬೋರಿಂಗ್ ಮಷಿನ್’ (ಸುರಂಗ ಕೊರೆಯುವ ಯಂತ್ರ) ಚೀನಾ ಮತ್ತು ಭಾರತದ ನಡುವೆ ಸಂಘರ್ಷಕ್ಕೆ ಕಾರಣವಾಗಬಾರದು ಎಂದು ಹೇಳಿದೆ. ಅತಿಯಾದ ಸೂಕ್ಷ್ಮತೆಗಳನ್ನು ಬದಿಗಿಟ್ಟು, ತಾಂತ್ರಿಕ ವಿಷಯಗಳನ್ನು ಸೂಕ್ತ ತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ನೀಡುವ ಮೂಲಕ, ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಹೆಚ್ಚಿನ ಅವಕಾಶವನ್ನು ಸೃಷ್ಟಿಸಿಕೊಳ್ಳಬಹುದು. ಗಡಿಯಲ್ಲಿ ಭಾರತ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು (ಇದು ಪಡೆಗಳ ತ್ವರಿತ ಚಲನೆಗೆ ಸಹಕಾರಿಯಾಗುತ್ತದೆ) ನಿಧಾನಗೊಳಿಸಲು ಚೀನಾ ಪ್ರಯತ್ನಿಸುತ್ತಿಲ್ಲ ಎಂದು ಪತ್ರಿಕೆ ಸ್ಪಷ್ಟಪಡಿಸಿದೆ.
ಚೀನಾದ ಆರ್ಥಿಕತೆಗೂ ಪೆಟ್ಟು
ಇತ್ತೀಚಿನ ರಫ್ತು ನಿಯಂತ್ರಣಗಳು, ಉಭಯ ದೇಶಗಳು ತಮ್ಮ ಸಂಬಂಧವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಜಾರಿಗೆ ಬಂದಿವೆ. ಯಂತ್ರಗಳು ಮತ್ತು ಅವುಗಳ ಬಿಡಿಭಾಗಗಳ ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾದರೆ, ಅದು ಪರಸ್ಪರ ಅಪನಂಬಿಕೆಯನ್ನು ಹೆಚ್ಚಿಸುವುದಕ್ಕೆ ಕಾರಣವಾಗಬಹುದು. ಸೆಪ್ಟೆಂಬರ್ನಲ್ಲಿ ನಡೆದ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ‘ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಬಾರದು’ ಎಂಬುದಕ್ಕೆ ಸಮ್ಮತಿಸಿದ್ದರು. ಅನಿಶ್ಚಿತ ಭೌಗೋಳಿಕ-ರಾಜಕೀಯ ವಾತಾವರಣದ ನಡುವೆ, ಭಾರತ ಮತ್ತು ಚೀನಾ ಎರಡೂ ದೇಶಗಳು ತಮ್ಮ ಸಂಬಂಧವನ್ನು ಸ್ಥಿರಗೊಳಿಸಲು ಪ್ರಯತ್ನಿಸಿವೆ. ಚೀನಾವು ಬಳಕೆಯ ಪ್ರಮಾಣದಲ್ಲಿನ ಇಳಿಕೆಯಿಂದಾಗಿ ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಇದರರ್ಥ, ಚೀನಾವು ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ರಫ್ತು ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ, ಜಾಗತಿಕ ಮಾರುಕಟ್ಟೆಗಳಲ್ಲಿ ಸರಕುಗಳ ಅತಿಯಾದ ಪೂರೈಕೆಯನ್ನು ಉಂಟುಮಾಡುತ್ತಿದೆ ಎಂಬ ಆರೋಪವನ್ನು ಯುರೋಪಿಯನ್ ಒಕ್ಕೂಟದಂತಹ ಇತರ ದೇಶಗಳು ಚೀನಾದ ಮೇಲೆ ಮಾಡಿವೆ.
ಭಾರತ ಹೇಳೋದೇನು?
ಚೀನಾದಿಂದ ನಡೆಯುವ ರಫ್ತಿನ ಮೇಲೆ ಪರಿಣಾಮ ಬೀರಿದರೆ, ಇಂತಹ ಯಂತ್ರಗಳನ್ನು ತಯಾರಿಸುವ ದೇಶೀಯ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳಲಿದೆ ಎಂದು ಭಾರತ ತಿಳಿಸಿದೆ. ಚೀನಾದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ಆದರೆ, ಅವರು ‘ಟನಲ್ ಬೋರಿಂಗ್ ಮೆಷಿನ್’ ಅನ್ನು ನೀಡದಿದ್ದರೆ, ಅದನ್ನು ನಾವೇ ಅಭಿವೃದ್ಧಿಪಡಿಸಿಕೊಳ್ಳುತ್ತೇವೆ. ನಾವು ಅವರನ್ನು ಕೇಳುವುದಿಲ್ಲ ಎಂದು ಭಾರತ ತಿಳಿಸಿದೆ. TBM-ಗಳ ನಿರ್ಮಾಣ ಮತ್ತು ಅವುಗಳ ಬಿಡಿಭಾಗಗಳ ಪೂರೈಕೆ ಸರಪಳಿಯಲ್ಲಿ ಚೀನಾ ಪ್ರಾಬಲ್ಯ ಹೊಂದಿರುವುದರಿಂದ, ಈ ಪ್ರಕ್ರಿಯೆಗೆ ಸಮಯ ಹಿಡಿಯುವ ನಿರೀಕ್ಷೆಯಿದೆ. ಭಾರತಕ್ಕೆ, ಟಿಬಿಎಂಗಳ ಮೇಲಿನ ರಫ್ತು ನಿಯಂತ್ರಣಗಳು ನಿರ್ಣಾಯಕ ಉಪಕರಣಗಳಿಗಾಗಿ ಚೀನಾವನ್ನು ಅವಲಂಬಿಸುವುದರ ಅಪಾಯಗಳನ್ನು ಒತ್ತಿಹೇಳುತ್ತವೆ. ದೇಶೀಯ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವುದರಿಂದ ತಕ್ಷಣದ ಅಗತ್ಯಗಳನ್ನು ಪರಿಹರಿಸಲಾಗುವುದಿಲ್ಲ.
