ಜೈಪುರ: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ 50 ಜಿಬಿ ಗ್ರಾಮದ ಬಳಿ ಅನುಪ್ಗಢ-ಸೂರತ್ಗಢ ರೈಲ್ವೆ ಮಾರ್ಗದಲ್ಲಿ (Anupgarh-Suratgarh Railway Line) ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಂಜಾಬ್ನ ಗುರುದಾಸ್ಪುರ ನಿವಾಸಿಗಳಾದ ದೇವೇಂದ್ರ ಸಿಂಗ್ ಮತ್ತು ಮಹಾಕ್ದೀಪ್ ಕೌರ್ ಎಂದು ಗುರುತಿಸಲಾಗಿದೆ. ಭದ್ರತಾ ಸಂಸ್ಥೆಗಳ ಮಾಹಿತಿಯೊಂದಿಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನವೆಂಬರ್ 3 ರಂದು ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿತ್ತು.
ಶ್ರೀ ಗಂಗಾನಗರದ ರೈಲ್ವೆ ಹಳಿಯಲ್ಲಿ ನಡೆದ ಸ್ಫೋಟದ ಹಿಂದೆ ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಇಡೀ ಪ್ರಯಾಣಿಕ ರೈಲನ್ನ ಗುರಿಯಾಗಿಸಲು ಹಳಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸುವ ಸಂಚು ರೂಪಿಸಲಾಗಿತ್ತು.
ರಾಜಸ್ಥಾನ ಎಟಿಎಸ್, ರಾಜಸ್ಥಾನ ಪೊಲೀಸರು ಮತ್ತು ಗುರುದಾಸ್ಪುರ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ನವೆಂಬರ್ 14 ರಂದು ಪಂಜಾಬ್ನ ಗುರುದಾಸ್ಪುರ್ ಜಿಲ್ಲೆಯಿಂದ ಮಹಾಕ್ದೀಪ್ ಕೌರ್ ಮತ್ತು ದೇವಿಂದರ್ ಸಿಂಗ್ ಎಂದು ಗುರುತಿಸಲಾದ ಇಬ್ಬರು ಆರೋಪಿಗಳನ್ನ ಬಂಧಿಸಲಾಯಿತು. ಅವರನ್ನು ವಿಚಾರಣೆಗಾಗಿ ರಾಜಸ್ಥಾನಕ್ಕೆ ಕರೆತರಲಾಗಿದೆ.

