ಹಿರಿಯ ತೆಲುಗು ನಟ, ನಿರ್ದೇಶಕ ಮತ್ತು ನಿರ್ಮಾಪಕ ಗಿರಿ ಬಾಬು (80) ಹೈದರಾಬಾದ್ನ ಕೊಂಡಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ನಿಧನರಾದರು.
ಹಿರಿಯ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ತೆಲುಗು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದರು. ನಾಯಕ, ವಿಲನ್, ಹಾಸ್ಯ ಪಾತ್ರ, ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.
ನಟನೆಯ ಜೊತೆಗೆ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದ್ದರು. ‘ಜಗಮೇ ಮಾಯ’ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದರು. ಚಿರಂಜೀವಿ, ನಾಗಾರ್ಜುನ್, ಬಾಲಕೃಷ್ಣ ಅವರ ಆರಂಭಿಕ ಚಿತ್ರಗಳಲ್ಲಿ ಗಿರಿಬಾಬು ವಿಲನ್ ಆಗಿ ನಟಿಸಿದ್ದರು.
ಗಿರಿ ಬಾಬು ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬರು ಹೆಣ್ಣು ಮಗಳು ಇದ್ದಾರೆ. ಅವರ ಹಿರಿಯ ಮಗ ರಘು ಬಾಬು ತೆಲುಗು ಹಾಸ್ಯನಟರಾಗಿದ್ದಾರೆ. ಅವರ ಕಿರಿಯ ಮಗ ಬೋಸ್ ಬಾಬು ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಗಿರಿ ಬಾಬು ಅವರ ಪತ್ನಿ ಶ್ರೀದೇವಿ 2016 ರಲ್ಲಿ ನಿಧನರಾಗಿದ್ದರು.
