ನವದೆಹಲಿ: ರಾಮಲೀಲಾ ಮೈದಾನದಲ್ಲಿ (Ramlila Maidan) ನಡೆಯುತ್ತಿದ್ದ ಪ್ರತಿಭಟನೆಗಳು, ಸಮಾವೇಶ, ರ್ಯಾಲಿಗಳು ಹಾಗೂ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಹೊಸ ಮಾರ್ಗಸೂಚಿಯನ್ನ (SOPs) ಬಿಡುಗಡೆ ಮಾಡಿದ್ದಾರೆ.
ಹೊಸ ಮಾರ್ಗಸೂಚಿಯ ಅನ್ವಯ, ಮೈದಾನದಲ್ಲಿ ಯಾವುದೇ ಕಾರ್ಯಕ್ರಮಗಳನ್ನ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಮಾತ್ರ ನಡೆಸಬೇಕು. ಅಷ್ಟೇ ಅಲ್ಲ ಗರಿಷ್ಠ 50,000 ಜನ ಮಾತ್ರ ಭಾಗವಹಿಸಬಹುದಾಗಿದೆ. ಕೇಂದ್ರ ದೆಹಲಿಯ ಈ ಸ್ಥಳದಲ್ಲಿ ನಡೆಯುವ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನ ಸುರಕ್ಷತೆ, ಭದ್ರತೆ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳ ನಿರ್ದಿಷ್ಟ ಚೌಕಟ್ಟಿನ ಅಡಿಯಲ್ಲಿ ತರುವುದು ಈ ನಿಯಮಗಳ ಉದ್ದೇಶವಾಗಿದೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆ (Protest) ನಡೆಸುವುದನ್ನ ಕಳೆದ ಅಕ್ಟೋಬರ್ನಲ್ಲಿ ದೆಹಲಿ ಪೊಲೀಸರು ರದ್ದುಗೊಳಿಸಿದರು. ಇದಕ್ಕೆ ಪರ್ಯಾಯವಾಗಿ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ (CBD) ಮೈದಾನಗಳನ್ನ ಪ್ರತಿಭಟನೆ ಆಯ್ಕೆಯ ಸ್ಥಳವಾಗಿ ಗುರುತಿಸಲಾಗಿತ್ತು. ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸಿತ್ತು. ಮತಗಳ್ಳತನ, ಚುನಾವಣಾ ಆಯೋಗದ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಹಾಗೂ ಎಸ್ಐಆರ್ ಪ್ರತಿಕ್ರಿಯೆ ವಿರೋಧಿಸಿ ರ್ಯಾಲಿ ನಡೆಸಿತ್ತು. ಈ ರ್ಯಾಲಿಯಲ್ಲಿ 10 ಲಕ್ಷ ಜನ ಪಾಲ್ಗೊಂಡಿದ್ದಾಗಿ ಕಾಂಗ್ರೆಸ್ ಹೇಳಿತ್ತು. ಈ ಬೆನ್ನಲ್ಲೇ ದೆಹಲಿ ಪೊಲೀಸರು ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ರಾಮಲೀಲಾ ಮೈದಾನಕ್ಕೆ ಹೊಸ SOP
* ಹೊಸ ಎಸ್ಒಪಿ ಅನ್ವಯ, ರಾಮಲೀಲಾ ಮೈದಾನದಲ್ಲಿ ನಡೆಯುವ ಸಭೆ, ರ್ಯಾಲಿ ಅಥವಾ ಪ್ರತಿಭಟನೆಗಳಲ್ಲಿ 50,000 ಕ್ಕಿಂತ ಹೆಚ್ಚಿನ ಜನ ಭಾಗವಹಿಸುವಂತಿಲ್ಲ. ಆದಾಗ್ಯೂ ಕಾರ್ಯಕ್ರಮದ ಸ್ವರೂಪ, ನಿರೀಕ್ಷಿತ ಜನಸಂದಣಿಯ ಗಾತ್ರ ಮತ್ತು ಲಭ್ಯವಿರುವ ಭದ್ರತಾ ವ್ಯವಸ್ಥೆಗಳ ಆಧಾರದ ಮೇಲೆ, ವೈಯಕ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆಯನ್ನ ಸಕ್ಷಮ ಪ್ರಾಧಿಕಾರವು ನಿರ್ಧರಿಸುತ್ತದೆ.
* ಪ್ರಸ್ತಾವಿತ ಮಾರ್ಗಸೂಚಿಗಳ ಅಡಿಯಲ್ಲಿ, ಅಂತಹ ಕಾರ್ಯಕ್ರಮಗಳನ್ನು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮಾತ್ರ ಅನುಮತಿಸಲಾಗುತ್ತದೆ.
ಈ ಎಸ್ಒಪಿ ಅನುಷ್ಠಾನಗೊಳಿಸಲು ಕರಡನ್ನು ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲೇ ಇದ್ದು ಅದರ ನಿಬಂಧನೆಗಳನ್ನ ಇನ್ನೂ ಅಂತಿಮಗೊಳಿಸಬೇಕಾಗಿದೆ.

