ತಾಯಿಯ ಮನಸ್ಸಿನಲ್ಲಿರುವ ಬಹುದಿನಗಳ ಆಸೆಯನ್ನು ಈಡೇರಿಸಲು ಮಗನೊಬ್ಬ ನಡೆಸುವ ಹೋರಾಟದ ಕಥೆಯೇ ‘ಗೌರಿಪುತ್ರ’ (Gauriputra). ಜೀ ಕನ್ನಡ ವಾಹಿನಿ ಹೊಸ ಧಾರಾವಾಹಿಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.
ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರದಲ್ಲಿ ರಿತ್ವಿಕ್ ಕಾಣಿಸಿಕೊಳ್ಳಲಿದ್ದು, ಆತನ ತಾಯಿ ಗೌರಿಯಾಗಿ ಅನು ಪ್ರಭಾಕರ್ ನಟಿಸಲಿದ್ದಾರೆ. ತುಂಬು ಕುಟುಂಬದಲ್ಲಿ ಬೆಳೆದ ಕಾರ್ತಿಕ್ಗೆ ತಾಯಿಯೇ ಪ್ರಪಂಚ. ಆಕೆಯ ಸಂತೋಷವೇ ಆತನಿಗೆ ಎಲ್ಲಕ್ಕಿಂತ ಮುಖ್ಯ.
ಆಸ್ತಿ, ಅಂತಸ್ತು, ಐಶ್ವರ್ಯ, ದೊಡ್ಡ ಕುಟುಂಬ ಹಾಗೂ ಹಲವು ಕಂಪನಿಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಗೌರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಆದರೆ, ಆಕೆಯ ಮನಸ್ಸಿನಲ್ಲಿ ಸದಾ ಕಾಡುವ ನೋವೊಂದಿದೆ. ಅದುವೇ ತನ್ನ ತವರು ಮನೆ, ಅಣ್ಣನ ಪ್ರೀತಿ ಮತ್ತು ಒಡನಾಟ. ಮದುವೆಯಾಗಿ ವರ್ಷಗಳೇ ಕಳೆದರೂ ತವರಿನಿಂದ ದೂರವಾದ ನೋವು ಆಕೆಯನ್ನು ಕಾಡುತ್ತಿರುತ್ತದೆ.
ತಾಯಿಯ ಮನಸ್ಸಿನ ಈ ನೋವನ್ನು ಅರಿಯುವ ಕಾರ್ತಿಕ್, ಆಕೆಗೆ ಮತ್ತೆ ತವರಿನ ಪ್ರೀತಿ ಮತ್ತು ಸಂಬಂಧಗಳನ್ನು ಮರಳಿ ಕೊಡಿಸಲು ನಿರ್ಧರಿಸುತ್ತಾನೆ. ಆದರೆ ಈ ಪ್ರಯಾಣದಲ್ಲಿ ‘ಮದುವೆ’ ಎಂಬ ಅನಿರೀಕ್ಷಿತ ತಿರುವು ಆತನ ಬದುಕಿಗೆ ಎದುರಾಗುತ್ತದೆ. ತಾಯಿಯ ಆಸೆಯನ್ನು ಈಡೇರಿಸಲು ಕಾರ್ತಿಕ್ ಯಾವ ಸವಾಲುಗಳನ್ನು ಎದುರಿಸುತ್ತಾನೆ ಎಂಬುದೇ ಧಾರಾವಾಹಿಯ ಕುತೂಹಲಕಾರಿ ಕಥೆ.ಇದನ್ನೂ ಓದಿ: ಬಾಕ್ಸಾಫೀಸ್ನಲ್ಲಿ ʻರಾಮಾಯಣʼ ಅಬ್ಬರ: 1,000 ಕೋಟಿ ಕ್ಲಬ್ ಸೇರಿದ ಯಶ್ ಸಿನಿಮಾ
‘ಗೌರಿಪುತ್ರ’ದಲ್ಲಿ ಅನು ಪ್ರಭಾಕರ್, ರಿತ್ವಿಕ್ ಹಾಗೂ ಮಹತಿ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ಕಿರುತೆರೆ ಮತ್ತು ರಂಗಭೂಮಿಯ ಹಲವು ಕಲಾವಿದರು ನಟಿಸಲಿದ್ದಾರೆ. ಹಲವು ವಿಭಿನ್ನ ಧಾರಾವಾಹಿಗಳನ್ನು ನೀಡಿರುವ ರಾಮ್ಜಿ ಈ ಧಾರಾವಾಹಿಯ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, “ಕೌಟುಂಬಿಕ ಕಥೆಗಳು ಕನ್ನಡ ಪ್ರೇಕ್ಷಕರಿಗೆ ಯಾವಾಗಲೂ ಹತ್ತಿರವಾಗಿವೆ. ತಾಯಿ-ಮಗನ ಬಾಂಧವ್ಯ, ತಾಯಿಯ ಆಸೆಯನ್ನು ಈಡೇರಿಸಲು ಮಗ ಪಡುವ ಪ್ರಯತ್ನ ಮತ್ತು ಅದರ ಸುತ್ತ ಹೆಣೆದಿರುವ ಕುಟುಂಬದ ಭಾವನೆಗಳು ಈ ಧಾರಾವಾಹಿಯ ವಿಶೇಷತೆ. ‘ಗೌರಿಪುತ್ರ’ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ.
ತಾಯಿಯ ಬಹುದಿನಗಳ ಕನಸನ್ನು ನನಸು ಮಾಡಲು ಹೊರಡುವ ಕಾರ್ತಿಕ್ನ ಪ್ರಯಾಣದಲ್ಲಿ ಏನೆಲ್ಲಾ ತಿರುವುಗಳು ಎದುರಾಗಲಿವೆ ಎಂಬುದನ್ನು ತಿಳಿಯಲು ನವೆಂಬರ್ 16ರವರೆಗೆ ಕಾಯಬೇಕಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವನ್ ಶಂಕರ್ ರಾಜಾ ʻಸಂಗೀತ ಹಬ್ಬʼ
