ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Singer Shreya Ghoshal) ಅವರು ಮಹಾರಾಷ್ಟ್ರದ ತಡೋಬ-ಅಂಧಾರಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ (Tadoba Andhari Tiger Reserve) ಹುಲಿಯ (Tiger) ರಾಜ ಗಾಂಭೀರ್ಯದ ನಡೆಯನ್ನು ಮೊದಲ ಬಾರಿಗೆ ಕಂಡ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾದಲ್ಲಿ ಅವರು ಹುಲಿಯ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಹುಲಿ ಅವರಿರುವ ವಾಹನವನ್ನು ಹಿಂಬಾಲಿಸುತ್ತಿರುವುದು ಸೆರೆಯಾಗಿದೆ. ಹುಲಿಯ ರಾಜ ಗಾಂಭೀರ್ಯ ನಡೆ ಕಂಡ ಗಾಯಕಿ ಬೆರಗಾಗಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮ್ಮನಿಗೆ ತವರಿನ ಪ್ರೀತಿ ಮರಳಿಸಿಕೊಡಲು ಮಗನ ಹೋರಾಟ – ಗೌರಿಪುತ್ರನ ತಾಯಿಯಾದ ಅನು
ಈ ರೋಮಾಂಚನಕಾರಿ ಅನುಭವನ್ನು ಪೋಸ್ಟ್ನಲ್ಲಿ ಹಂಚಿಕೊಂಡಿರುವ ಅವರು, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಕಾಡಿನಲ್ಲಿ ತನ್ನ ಪೂರ್ಣ ವೈಭವದೊಂದಿಗೆ ಮೊದಲ ಬಾರಿಗೆ ನೋಡುವ ಸೌಭಾಗ್ಯ ನನಗೆ ಸಿಕ್ಕಿತು. ಛೋಟಾ ದಡಿಯಾಲ್ ಅನ್ನು (ತಡೋಬ-ಅಂಧಾರಿ ಅಭಯಾರಣ್ಯದಲ್ಲಿ ಕಂಡುಬರುವ ಗಂಡು ಹುಲಿ) ನೋಡುವುದು ಕೇವಲ ಅದೃಷ್ಟವಲ್ಲ, ಅದೊಂದು ರೋಮಾಂಚನಕಾರಿ ಅನುಭವ ಎಂದು ಬರೆದುಕೊಂಡಿದ್ದಾರೆ.
ನಮ್ಮ ಗೈಡ್ ಸಂದೀಪ್ ತಮ್ಮ ಸೂಕ್ಷ್ಮ ಕಣ್ಣುಗಳಿಂದ ಎತ್ತರದ ಹುಲ್ಲುಗಳಲ್ಲಿ ಸಂಪೂರ್ಣವಾಗಿ ಮರೆಯಲ್ಲಿ ನಿದ್ರಿಸುತ್ತಿರುವ ಹುಲಿಯನ್ನು ಪತ್ತೆ ಮಾಡಿದರು. ಆ ಸ್ಥಳದಿಂದ ಹುಲಿ ಹೊರಬರುವ ತನಕ ನಾವು ತಾಳ್ಮೆಯಿಂದ ಕಾಯುತ್ತಿದ್ದೆವು. ಅದು ಹೊರಗೆ ಬರುತ್ತಿದ್ದಂತೆ ಆ ಕ್ಷಣವನ್ನು ಶಿಲಾದಿತ್ಯ (ಪತಿ) ಅವರು ಸೆರೆಹಿಡಿದರು. ನಮ್ಮ ಚಾಲಕ ಫಾರೂಕ್ ಸಹ ಉತ್ತಮವಾಗಿ ಕೆಲಸ ನಿರ್ವಹಿಸಿದರು.
ಛೋಟಿ ಮಧು (ಹೆಣ್ಣು ಹುಲಿ) ತನ್ನ ಮೂರು ಮರಿಗಳೊಂದಿಗೆ ಇರುವುದನ್ನು ನಾವು ತುಂಬಾ ಹತ್ತಿರದಿಂದ ನೋಡಿದೆವು. ನಾನು ತಾಯಿಯಾಗಿ ಆ ಹುಲಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಅದು ನಿದ್ರೆ ಮಾಡಲು ಬಯಸಿದ್ದರೂ ಮರಿಗಳಿಗಾಗಿ ಎಚ್ಚರವಾಗಿತ್ತು ಎಂದು ತಮ್ಮ ತಾಯ್ತನದ ಅನುಭವವನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಅಭಯಾರಣ್ಯದ ಸೌಂದರ್ಯವನ್ನು ಸವಿಯಲು ಹಾಗೂ ಪ್ರಾಣಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಭಯಾರಣ್ಯದ ಒಳಗೆ ಮೊಬೈಲ್ ಫೋನ್ಗಳನ್ನು ಅನುಮತಿಸಲಾಗುವುದಿಲ್ಲ. ಈ ಸುಂದರವಾದ ಅಭಯಾರಣ್ಯದಲ್ಲಿ ಜೀವನದ ಎಲ್ಲಾ ಚಿಂತೆಗಳು ಕಣ್ಮರೆಯಾಯಿತು. ತಡೋಬಾದ ಸ್ಥಳೀಯರು ಪ್ರಾಣಿಗಳ ಬಗ್ಗೆ ಮಾತ್ರವಲ್ಲದೆ ವಿವಿಧ ಪಕ್ಷಿಗಳು, ಕೀಟಗಳು, ಮರಗಳು, ಪೊದೆಗಳ ಬಗ್ಗೆಯೂ ಹೊಂದಿರುವ ಜ್ಞಾನವನ್ನು ನೋಡಿ ನಾನು ಆಶ್ಚರ್ಯಚಕಿತಳಾದೆ. ಅವರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಾರೆ ಮತ್ತು ತಮ್ಮ ಕಾಡುಗಳನ್ನು ಆಳವಾಗಿ ಗೌರವಿಸುತ್ತಾರೆ. ಇದೊಂದು ಜೀವನವನ್ನು ಬದಲಾಯಿಸುವ ಅನುಭವ. ನಾನು ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವನ್ ಶಂಕರ್ ರಾಜಾ ʻಸಂಗೀತ ಹಬ್ಬʼ
