ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ (Air Pollution) ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, ವಾತಾವರಣದಲ್ಲಿ ಸೂಕ್ಷ್ಮ ಧೂಳಿನ ಕಣಗಳಾದ ಪಿಎಂ 2.5 ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿರುವ ಮಿತಿಗಿಂತ ಹಲವು ಪಟ್ಟು ಹೆಚ್ಚಾಗಿದೆ.
ದಟ್ಟ ಹೊಗೆ ಮತ್ತು ಮಂಜಿನ ವಾತಾವರಣದಿಂದಾಗಿ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದ ಜನರು ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಅಪಾಯಗಳನ್ನು ಎದುರಿಸುವ ಆತಂಕ ಎದುರಾಗಿದೆ. ದೀಪಾವಳಿ ಬೆನ್ನಲ್ಲೆ ದಿನದಿಂದ ದಿನಕ್ಕೆ ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ವಿಷಮ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜನರು ನಿರಂತರವಾಗಿ ವಿಷ ಗಾಳಿ ಸೇವಿಸುತ್ತಿದ್ದು ಕಣ್ಣ ಮೂಗು ಗಂಟಲು ಉರಿ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 400ರ ಗಡಿ ದಾಟಿದ್ದು, ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಹಂತ ತಲುಪಿದೆ. ಕೆಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 500ರ ಸಮೀಪ ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಳಗ್ಗೆ 9.30ರ ವೇಳೆಗೆ ದೆಹಲಿಯ ಗಾಳಿಯಲ್ಲಿ ಪಿಎಂ 2.5 ಪ್ರಮಾಣ ಪ್ರತಿ ಘನ ಮೀಟರ್ಗೆ 296 ಮೈಕ್ರೊಗ್ರಾಂ ದಾಖಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ 24 ಗಂಟೆಗಳ ಸರಾಸರಿ ಪ್ರಮಾಣ ಪ್ರತಿ ಘನ ಮೀಟರ್ಗೆ 15 ಮೈಕ್ರೊಗ್ರಾಂ ಮೀರಬಾರದು. ಈ ಹಿನ್ನೆಲೆ ದೆಹಲಿಯಲ್ಲಿ ದಾಖಲಾಗಿರುವ ಪ್ರಮಾಣ ನಿಗದಿತ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚಾಗಿರುವ ಕಳವಳಕಾರಿಯಾಗಿದೆ.
ಪಿಎಂ 2.5 ಕಣಗಳು ಅತ್ಯಂತ ಸೂಕ್ಷ್ಮವಾಗಿದ್ದು, ಉಸಿರಾಟದ ಮೂಲಕ ಶ್ವಾಸಕೋಶದ ಆಳದವರೆಗೆ ತಲುಪಬಲ್ಲವು. ಇವುಗಳಲ್ಲಿ ಕೆಲವು ರಕ್ತಪ್ರವಾಹಕ್ಕೂ ಸೇರಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಉಸಿರಾಟದ ತೊಂದರೆ, ಅಸ್ತಮಾ ಉಲ್ಬಣ, ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳು, ಪಾರ್ಶ್ವವಾಯು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು. ದೀರ್ಘಕಾಲ ಇಂತಹ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಅಕಾಲಿಕ ಮರಣದ ಅಪಾಯವೂ ಇದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವುದರಿಂದ ಹೊರಬರುವ ಹೊಗೆ ದೆಹಲಿಯ ಮಾಲಿನ್ಯಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದೆ. ವಾಯವ್ಯ ದಿಕ್ಕಿನಿಂದ ಬೀಸುವ ಗಾಳಿ ಈ ಹೊಗೆಯನ್ನು ರಾಷ್ಟ್ರ ರಾಜಧಾನಿಯತ್ತ ತರುತ್ತಿದೆ. ನೆಲಮಟ್ಟದಲ್ಲಿ ಗಾಳಿಯ ವೇಗ ಕಡಿಮೆಯಾಗಿರುವುದರಿಂದ ಮಾಲಿನ್ಯಕಾರಕ ಕಣಗಳು ವಾತಾವರಣದಲ್ಲಿ ಚದುರದೆ ಒಂದೇ ಪ್ರದೇಶದಲ್ಲಿ ಸಂಗ್ರಹವಾಗುತ್ತಿವೆ.
ಇದರ ಜೊತೆಗೆ ವಾಹನಗಳ ಹೊಗೆ, ಕೈಗಾರಿಕೆಗಳ ಹೊರಸೂಸುವಿಕೆ, ಕಟ್ಟಡ ನಿರ್ಮಾಣದ ಧೂಳು, ಕಸ ಸುಡುವಿಕೆ ಸೇರಿದಂತೆ ಸ್ಥಳೀಯ ಮೂಲಗಳಿಂದಲೂ ಮಾಲಿನ್ಯ ಹೆಚ್ಚುತ್ತಿದೆ. ಸದ್ಯಕ್ಕೆ ಮಳೆ ಅಥವಾ ಗಾಳಿಯ ಮೂಲಕ ಮಾಲಿನ್ಯ ಕಡಿಮೆಯಾಗುವಂತಹ ಅನುಕೂಲಕರ ಹವಾಮಾನ ವ್ಯವಸ್ಥೆಯ ನಿರೀಕ್ಷೆಯಿಲ್ಲ. ಹೀಗಾಗಿ ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಡುವ ಆತಂಕ ಮುಂದುವರಿದಿದೆ.


