ರಾಗಿ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಇದರಲ್ಲಿ ಕ್ಯಾಲ್ಸಿಯಂ, ಫೈಬರ್ ಮತ್ತು ಹಲವು ಪೌಷ್ಟಿಕಾಂಶಗಳಿವೆ. ಸಾಮಾನ್ಯವಾಗಿ ರಾಗಿ ಮುದ್ದೆ ತಯಾರಿಸಲು ಬಳಸುವ ರಾಗಿಯಿಂದಲೇ ರುಚಿಕರವಾದ ಪುಲಾವ್ ಕೂಡ ಮಾಡಬಹುದು. ಸಂಪೂರ್ಣ ರಾಗಿ ಕಾಳುಗಳು, ಈರುಳ್ಳಿ, ಹಸಿ ಬಟಾಣಿ ಮತ್ತು ಮಸಾಲೆಗಳನ್ನು ಬಳಸಿ ಕಡಿಮೆ ಸಮಯದಲ್ಲಿ ಈ ಆರೋಗ್ಯಕರ ರೆಸಿಪಿಯನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು ಮತ್ತು ಅಳತೆ
ರಾಗಿ – 1 ಕಪ್ (1 ಗಂಟೆ ನೆನೆಸಿದ್ದು)
ತುಪ್ಪ – 1 ದೊಡ್ಡ ಚಮಚ
ಜೀರಿಗೆ – 1 ಟೀಸ್ಪೂನ್
ಕಡಲೆಬೀಜ – 1 ದೊಡ್ಡ ಚಮಚ
ಈರುಳ್ಳಿ – 1 (ಉದ್ದಕ್ಕೆ ಹೆಚ್ಚಿದ್ದು)
ಹಸಿ ಬಟಾಣಿ – 2 ದೊಡ್ಡ ಚಮಚ
ಅರಿಶಿನ ಪುಡಿ – ¼ ಟೀಸ್ಪೂನ್
ಖಾರದ ಪುಡಿ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
ನೀರು – 4 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲು ಒಂದು ಕಪ್ ಸಂಪೂರ್ಣ ರಾಗಿಯನ್ನು 2–3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಸುಮಾರು 1 ಗಂಟೆ ನೆನೆಸಿಡಿ.
ಈಗ ಕುಕ್ಕರ್ನಲ್ಲಿ ಒಂದು ದೊಡ್ಡ ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಸೇರಿಸಿ. ಜೀರಿಗೆ ಸಿಡಿದ ಬಳಿಕ ಕಡಲೆಬೀಜ ಹಾಕಿ ಸ್ವಲ್ಪ ಹುರಿಯಿರಿ.
ನಂತರ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಹಸಿ ಬಟಾಣಿ ಸೇರಿಸಿ ಚೆನ್ನಾಗಿ ಬಾಡಿಸಿಕೊಳ್ಳಿ. ಈರುಳ್ಳಿ ಸ್ವಲ್ಪ ಮೆತ್ತಗಾದ ಬಳಿಕ ಅರಿಶಿನ ಪುಡಿ, ಖಾರದ ಪುಡಿ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
ಈಗ ನೆನೆಸಿಟ್ಟ ರಾಗಿಯನ್ನು ನೀರು ಸೋಸಿ ಕುಕ್ಕರ್ಗೆ ಸೇರಿಸಿ. ಇದಕ್ಕೆ ನಾಲ್ಕು ಕಪ್ ನೀರು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಕುಕ್ಕರ್ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಸುಮಾರು 20 ನಿಮಿಷ ಬೇಯಿಸಿಕೊಳ್ಳಿ. ಬೇಯಿಸಿದ ನಂತರ ಕುಕ್ಕರ್ನ ಒತ್ತಡ ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಮುಚ್ಚಳ ತೆರೆದು ರಾಗಿ ಚೆನ್ನಾಗಿ ಬೆಂದಿದೆಯೇ ಎಂದು ಪರಿಶೀಲಿಸಿ.
ಕೊನೆಯದಾಗಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ ನಿಧಾನವಾಗಿ ಮಿಶ್ರಣ ಮಾಡಿ. ರುಚಿಕರವಾದ ರಾಗಿ ಪುಲಾವ್ ಸವಿಯಲು ಸಿದ್ಧ.
ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಪೌಷ್ಟಿಕ ರಾಗಿ ಪುಲಾವ್ ಅನ್ನು ಒಮ್ಮೆ ಟ್ರೈ ಮಾಡಿ



