– ರಕ್ತದಾನ ಮಾಡಿ ಜೀವ ಉಳಿಸಿದ್ದ ಯುವಕನಿಂದ ಈಗ ಅಂಗಾಂಗ ದಾನ
– ಮಗನ ಅಗಲಿಕೆಯ ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ
ಮಡಿಕೇರಿ: ಅಂಗಾಂಗ ದಾನ ಮಾಡಿ ಮಡಿಕೇರಿಯ (Madikeri) ಯುವಕ ಯೋಗೇಶ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
22 ವಯಸ್ಸಿನ ಯೋಗೇಶ್ ಮಡಿಕೇರಿಯ ಸಪ್ತಗಿರಿ ಎಂಟರ್ಪ್ರೈಸಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ತಡರಾತ್ರಿಯವರೆಗೂ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ. ಕಚೇರಿಯಲ್ಲಿ ದೀಪಾಲಂಕಾರ, ಪೂಜಾ ಕಾರ್ಯಕ್ರಮದ ಸಿದ್ಧತೆಗಳನ್ನು ಅತ್ಯಂತ ಉತ್ಸಾಹದಿಂದ ಪೂರ್ಣಗೊಳಿಸಿ ಮನೆಗೆ ತೆರಳಿದ್ದ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಭಾನುವಾರ ಬೆಳಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದ ಯೋಗೇಶ್ನನ್ನು ತಕ್ಷಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ಪರೀಕ್ಷೆಗಳ ನಂತರ ಯೋಗೇಶ್ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಳಿಕ ಆತನನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೆ, ಈ ದುಃಖದ ನಡುವೆಯೂ ಯೋಗೇಶ್ ಕುಟುಂಬ ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲರ ಮನಗೆದ್ದಿದೆ. ತಮ್ಮ ಮನೆಯ ಮಗನ ಬದುಕು ಮರಳಿ ಸಿಗದಿದ್ದರೂ, ಆತನ ಅಂಗಾಂಗಗಳ ಮೂಲಕ ಬೇರೆಯವರ ಬದುಕು ಉಳಿಯಲಿ ಎಂಬ ಮಹದಾಸೆಯಿಂದ ಕುಟುಂಬ ಅಂಗಾಂಗ ದಾನಕ್ಕೆ ಸಮ್ಮತಿಸಿದೆ.
ಯೋಗೇಶ್ನ ಮಾನವೀಯ ಸೇವೆ
22 ವರ್ಷದ ಯುವಕ ಯೋಗೇಶ್ ಹಲವಾರು ವರ್ಷಗಳಿಂದ ರಕ್ತದಾನ ಮಾಡುತ್ತಿದ್ದ. ಇದೀಗ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ ಮಾಡಿದೆ. ಹಲವು ಜೀವಗಳಿಗೆ ಹೊಸ ಬದುಕಿನ ಭರವಸೆ ನೀಡುವ ಸಾರ್ಥಕ ಪ್ರಯತ್ನ ನಡೆದಿದೆ. ಇಂದು ಮಡಿಕೇರಿಯ ವೈದ್ಯಕೀಯ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಸಿದ ವೈದ್ಯರ ತಂಡ ಯೋಗೇಶ್ ದೇಹದಿಂದ ಲಿವರ್ ಹಾಗೂ ಕಣ್ಣುಗಳನ್ನು ತೆಗೆದು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಿದೆ. ಮೃತದೇಹಕ್ಕೆ ಆಸ್ಪತ್ರೆಯ ಸಿಬ್ಬಂದಿ ಗೌರವ ಸಮರ್ಪಣೆ ಸಲ್ಲಿಸಿದ್ದಾರೆ.
