ಬೆಂಗಳೂರು: ಕನ್ನಡದ ಹೆಮ್ಮೆ ಒಲಂಪಿಕ್ ಕ್ರೀಡಾಪಟು ಎಂ.ಎಂ.ಸೋಮಯ್ಯ (M.M.Somaya) ಅವರ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದ ಸೋಮಯ್ಯ ಕಳೆದ ತಿಂಗಳ 28ರಂದು ಕುಟುಂಬ ಸಮೇತ ತನ್ನ ತವರು ಕೊಡಗಿಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಬೆಂಗಳೂರಿನ ಮನೆಯ ಬಾಗಿಲು ಮುರಿದು ಸೋಮಯ್ಯ ಅವರು ಗಳಿಸಿದ್ದ 8 ಅಂತಾರಾಷ್ಟ್ರೀಯ ಚಿನ್ನದ ಪದಕಗಳು, 1 ಕ್ಯಾಮೆರಾ, 1 ಕೊಡಗು ಕತ್ತಿ 1 ಒಲಂಪಿಕ್ ಬ್ಯಾಗ್, ಚಿನ್ನದ ವಸ್ತುಗಳು, ನಗದು ದೋಚಿದ್ದರು. ಇದನ್ನೂ ಓದಿ: ಹಾಕಿ ದಿಗ್ಗಜ ಸೋಮಯ್ಯ ಮನೆಯಲ್ಲಿ ಕಳವು – ಮಾಸ್ಕೋ ಒಲಿಂಪಿಕ್ಸ್ ಸ್ವರ್ಣ ಪದಕವನ್ನೇ ದೋಚಿದ ಖದೀಮರು
ವಿಚಾರ ತಿಳಿದ ಕ್ರೀಡಾಪಟು ಸೋಮಯ್ಯ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಾಣಿಕ್ಯ ಮತ್ತು ಭರತ್ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಾಣಿಕ್ಯ ಖತರ್ನಾಕ್ ಮನೆಗಳ್ಳನಾಗಿದ್ದು ತಮಿಳುನಾಡು, ಕರ್ನಾಟಕ ಸೇರಿ 33 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ವಿಚಾರಣೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.
ಏನು ದೋಚಿದ್ದರು?
ಖದೀಮರು ಐತಿಹಾಸಿಕ ಕ್ರೀಡಾ ಪದಕಗಳು ಹಾಗೂ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ್ದರು. 1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತ ತಂಡ ಗೆದ್ದಿದ್ದ ಐತಿಹಾಸಿಕ ಚಿನ್ನದ ಪದಕ, 1982ರ ನವದೆಹಲಿ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಬೆಳ್ಳಿ ಪದಕ, 1986ರ ಸಿಯೋಲ್ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಕಂಚಿನ ಪದಕ, 1982ರ ಆಮ್ಸ್ಟರ್ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಯಿಸಿದ್ದ ಕಂಚಿನ ಪದಕ, 8 ಗ್ರಾಂ ತೂಕದ ಚಿನ್ನದ ನಾಣ್ಯ (ಅಂದಾಜು ಮೌಲ್ಯ 1,00,000 ರೂ.), 10 ಗ್ರಾಂ ತೂಕದ ಒಂದು ಚಿನ್ನದ ಬಳೆ (ಅಂದಾಜು ಮೌಲ್ಯ 1,30,000 ರೂ.), 200 ಗ್ರಾಂ ತೂಕದ 6 ಬೆಳ್ಳಿ ಚಮಚಗಳು (ಅಂದಾಜು ಮೌಲ್ಯ 45,000 ರೂ.) ತಲಾ 72 ಗ್ರಾಂ ತೂಕದ 2 ಬೆಳ್ಳಿ ಕಪ್ಗಳು (ಒಟ್ಟು 144 ಗ್ರಾಂ, ಅಂದಾಜು ಮೌಲ್ಯ 30,000 ರೂ.). 80 ಗ್ರಾಂ ತೂಕದ ಒಂದು ಬೆಳ್ಳಿ ಪಾತ್ರೆ (ಅಂದಾಜು ಮೌಲ್ಯ 18,000 ರೂ.), 30,000 ರೂ. ನಗದು ಹಣವನ್ನು ಕದ್ದಿದ್ದರು. ಇದನ್ನೂ ಓದಿ: ಕೋರ್ಟ್ ಆದೇಶದ ಬೆನ್ನಲ್ಲೇ ದರ್ಶನ್ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ
