– ಫುಲ್ ಕ್ರೀಮ್ ಹಾಲಿನ ಬೆಲೆ 76 ರೂ.ಗೆ ಹೆಚ್ಚಳ
ನವದೆಹಲಿ: ದೆಹಲಿ-ಎನ್ಸಿಆರ್ (Delhi-NCR) ಪ್ರದೇಶದ ಗ್ರಾಹಕರಿಗೆ ಬೆಲೆ ಏರಿಕೆಯ ಮತ್ತೊಂದು ಹೊರೆ ಎದುರಾಗಿದೆ. ಮದರ್ ಡೈರಿ ಸಂಸ್ಥೆಯು ವಿವಿಧ ಮಾದರಿಯ ಹಾಲಿನ ದರವನ್ನು (Milk Rate) ಪ್ರತಿ ಲೀಟರ್ಗೆ 2ರಿಂದ 4 ರೂ.ಗೆ ಹೆಚ್ಚಿಸಿದ್ದು, ಪರಿಷ್ಕೃತ ದರ ನಾಳೆಯಿಂದ (ನ.12) ಜಾರಿಗೆ ಬರಲಿವೆ. ಹಾಲಿನ ದರ ಏರಿಕೆಯಿಂದ ಪ್ರತಿನಿತ್ಯ ಹಾಲು ಖರೀದಿಸುವ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.
ಮದರ್ ಡೈರಿಯ (Mother Dairy) ಹೊಸ ದರದ ಪ್ರಕಾರ, ಫುಲ್ ಕ್ರೀಮ್ ಹಾಲಿನ ಬೆಲೆ ಪ್ರತಿ ಲೀಟರ್ಗೆ 72 ರೂ.ಯಿಂದ 76 ರೂ.ಗೆ ಏರಿಕೆಯಾಗಿದೆ. ಅಂದರೆ ನಾಲ್ಕು ರೂ. ಹೆಚ್ಚಳವಾಗಿದೆ. ಪ್ಯಾಕೆಟ್ ಟೋನ್ಡ್ ಹಾಲಿನ ದರ 60 ರೂ.ಯಿಂದ 62 ರೂ.ಗೆ ಹೆಚ್ಚಿಸಲಾಗಿದೆ. ಡಬಲ್ ಟೋನ್ಡ್ ಹಾಲಿನ ಬೆಲೆ 54 ರೂ.ಯಿಂದ 56 ರೂ.ಗೆ ಏರಿಕೆಯಾಗಿದೆ. ಹಸುವಿನ ಹಾಲಿನ ದರ 62 ರೂ.ಯಿಂದ 65 ರೂ.ಗೆ ಹೆಚ್ಚಳವಾಗಿದೆ. ಇನ್ನು ಮುಕ್ತ ವಿತರಣೆಯ ಟೋನ್ಡ್ ಹಾಲಿನ ಬೆಲೆ ಪ್ರತಿ ಲೀಟರ್ಗೆ 58 ರೂ.ಯಿಂದ 60 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ದೀಪಾವಳಿ ಪಾರ್ಟಿಯಲ್ಲಿ ನಾನ್ವೆಜ್ – ಪ್ರಿಯಾಂಕಾ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ
ರೈತರಿಂದ ಹಾಲು ಖರೀದಿಸುವ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಲಿನ ಖರೀದಿ ವೆಚ್ಚ ಹೆಚ್ಚಾದ ಕಾರಣ ಹೆಚ್ಚುವರಿ ವೆಚ್ಚದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ಸಂಸ್ಥೆ ನಿರ್ಧರಿಸಿದೆ. ಮದರ್ ಡೈರಿ ತನ್ನ ಹಾಲಿನ ಮಾರಾಟದಿಂದ ಬರುವ ಒಟ್ಟು ಆದಾಯದ ಶೇ.75ರಿಂದ 80ರಷ್ಟು ಪಾಲನ್ನು ರೈತರಿಗೆ ಪಾವತಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದಿನಕ್ಕೆ 35 ಲಕ್ಷ ಲೀಟರ್ ಮಾರಾಟ:
ಮದರ್ ಡೈರಿ ಸಂಸ್ಥೆಯು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಪ್ರತಿದಿನ ಸರಿಸುಮಾರು 35 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತದೆ. ತನ್ನ ಮಾರಾಟ ಮಳಿಗೆಗಳು, ಸಾಮಾನ್ಯ ಚಿಲ್ಲರೆ ಅಂಗಡಿಗಳು ಹಾಗೂ ಆನ್ಲೈನ್ ವಾಣಿಜ್ಯ ವೇದಿಕೆಗಳ ಮೂಲಕ ಗ್ರಾಹಕರಿಗೆ ಹಾಲು ಪೂರೈಸುತ್ತಿದೆ. ದೇಶಾದ್ಯಂತ ಸಂಸ್ಥೆಯ ಒಟ್ಟು ದೈನಂದಿನ ಹಾಲಿನ ಮಾರಾಟ 50 ಲಕ್ಷ ಲೀಟರ್ಗಿಂತ ಹೆಚ್ಚಿದೆ.
ಇದಕ್ಕೂ ಮೊದಲು 2026ರ ಮೇ 14ರಂದು ಮದರ್ ಡೈರಿ ಹಾಲಿನ ದರವನ್ನು ಹೆಚ್ಚಿಸಿತ್ತು. ಅದಕ್ಕೂ ಮುನ್ನ 2025ರ ಏಪ್ರಿಲ್ನಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಸುಮಾರು ಆರು ತಿಂಗಳ ಅಂತರದಲ್ಲಿ ಮತ್ತೊಮ್ಮೆ ದರ ಏರಿಕೆ ಮಾಡಿದೆ.ಇದನ್ನೂ ಓದಿ: ಪಟಾಕಿ ಸಿಡಿಸುವುದರಲ್ಲಿ ದೊಡ್ಡ ವಿಷಯವೇನಿಲ್ಲ: ಯೋಗಿ ಆದಿತ್ಯನಾಥ್ ಸಮರ್ಥನೆ
