ಶತಮಾನಗಳ ಇತಿಹಾಸವನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಸ್ಮಾರಕಗಳು ಕೇವಲ ಕಲ್ಲು, ಮಣ್ಣು, ಇಟ್ಟಿಗೆಗಳಿಂದ ನಿರ್ಮಿತ ಕಟ್ಟಡಗಳಲ್ಲ. ಅವು ಒಂದು ಕಾಲಘಟ್ಟದ ಬದುಕು, ಸಂಸ್ಕೃತಿ, ಕಲೆ, ಆಡಳಿತ, ವಾಸ್ತುಶಿಲ್ಪ ಮತ್ತು ನಮ್ಮ ಪೂರ್ವಜರ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜೀವಂತ ದಾಖಲೆಗಳು. ಆದರೆ ರಾಜ್ಯದಲ್ಲಿ (Karnataka) ಇಂತಹ ಅಮೂಲ್ಯ ಇತಿಹಾಸದ ನೆಲೆಗಳ ಸುತ್ತ ಅತಿಕ್ರಮಣದ ಕರಿನೆರಳು ಆವರಿಸುತ್ತಿರುವುದು ಆತಂಕಕಾರಿ ಸಂಗತಿ.
ಕರ್ನಾಟಕದ 60 ಪಾರಂಪರಿಕ ತಾಣಗಳ ಮೇಲೆ ಒತ್ತುವರಿ ನೆರಳು
ಇತ್ತೀಚಿನ ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿರುವ ಸುಮಾರು 60 ಕೇಂದ್ರ ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಅತಿಕ್ರಮಣವನ್ನು ಎದುರಿಸುತ್ತಿವೆ. ದೇಶಾದ್ಯಂತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ವ್ಯಾಪ್ತಿಯಲ್ಲಿರುವ 3,686 ಸಂರಕ್ಷಿತ ಸ್ಮಾರಕ ಹಾಗೂ ಪುರಾತತ್ವ ತಾಣಗಳ ಪೈಕಿ 414 ತಾಣಗಳಲ್ಲಿ ಅತಿಕ್ರಮಣದ (Encroachment of Historical Sites) ವರದಿಯಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಹಂಪಿಯಲ್ಲಿರುವ ಹಲವಾರು ಸಂರಕ್ಷಿತ ತಾಣಗಳ ಒಂದು ಭಾಗವನ್ನು ವಸತಿ ಪ್ರದೇಶಗಳಾಗಿ ಪರಿವರ್ತಿಸಲಾಗಿದೆ ಎಂದು ವರದಿಯಾಗಿದೆ. ಇದು ರಾಜ್ಯದ ಪಾರಂಪರಿಕ ಸಂಪತ್ತಿನ ಸಂರಕ್ಷಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕರ್ನಾಟಕದ ಇತಿಹಾಸದ ಹಾದಿಯಲ್ಲಿ ಹೆಜ್ಜೆ ಹಾಕಿದರೆ ಅನೇಕ ರಾಜವಂಶಗಳ ಆಡಳಿತದ ವೈಭವ ಕಣ್ಣಿಗೆ ಕಟ್ಟುತ್ತದೆ. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಬಹಮನಿ ಮತ್ತು ಆದಿಲ್ಶಾಹಿ ಆಡಳಿತದ ಕಾಲದಲ್ಲಿ ತಮ್ಮದೇ ಆದ ಕಲಾ ಪರಂಪರೆ ಮತ್ತು ವಾಸ್ತುಶಿಲ್ಪದ ಕೊಡುಗೆಗಳನ್ನು ನೀಡಿದ್ದಾರೆ. ಹಂಪಿಯ ಅವಶೇಷಗಳು, ವಿಜಯಪುರದ ಗೋಳಗುಮ್ಮಟ, ಬೀದರ್ನ ಕೋಟೆ, ಕಲಬುರಗಿಯ ಐತಿಹಾಸಿಕ ನೆಲೆಗಳು ಇಂದಿಗೂ ಕರ್ನಾಟಕದ ಗತಕಾಲದ ವೈಭವವನ್ನು ಸಾರುತ್ತಿವೆ. ಇಂತಹ ತಾಣಗಳ ಅತಿಕ್ರಮಣ ನಿಜಕ್ಕೂ ಬೇಸರದ ಸಂಗತಿ.
ಅತಿಕ್ರಮಣ ಎಂದರೆ?
ಅತಿಕ್ರಮಣ ಎಂದರೆ ಕೇವಲ ಸ್ಮಾರಕದ ಗೋಡೆಗೆ ಹೊಂದಿಕೊಂಡಂತೆ ಮನೆ ಅಥವಾ ಅಂಗಡಿ ನಿರ್ಮಿಸುವುದಷ್ಟೇ ಅಲ್ಲ. ಸ್ಮಾರಕದ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ, ಸಂರಕ್ಷಿತ ಪ್ರದೇಶದಲ್ಲಿ ಅನುಮತಿಯಿಲ್ಲದ ಚಟುವಟಿಕೆ, ಸ್ಮಾರಕದ ಮೂಲ ಸ್ವರೂಪಕ್ಕೆ ಧಕ್ಕೆ ತರುವ ಬದಲಾವಣೆಗಳು ಕೂಡ ಪಾರಂಪರಿಕ ತಾಣಗಳ ಸಂರಕ್ಷಣೆಗೆ ಸವಾಲಾಗುತ್ತವೆ. ಇಂತಹ ಬೆಳವಣಿಗೆಗಳಿಂದ ಸ್ಮಾರಕಗಳ ಸುತ್ತಲಿನ ಪರಿಸರ, ಐತಿಹಾಸಿಕ ಹಿನ್ನೆಲೆ ಮತ್ತು ವಾಸ್ತುಶಿಲ್ಪದ ವೈಶಿಷ್ಟ್ಯಗಳು ಕ್ರಮೇಣ ನಾಶವಾಗುತ್ತದೆ.
ಅತಿಕ್ರಮಣಕ್ಕೆ ಕಾರಣವೇನು?
ನಗರೀಕರಣ, ಜನಸಂಖ್ಯೆಯ ಒತ್ತಡ, ಭೂಮಿಯ ಮೌಲ್ಯ ಹೆಚ್ಚಳ ಮತ್ತು ಸಾರ್ವಜನಿಕರಲ್ಲಿ ಪಾರಂಪರಿಕ ತಾಣಗಳ ಕುರಿತು ಅರಿವಿನ ಕೊರತೆ ಅತಿಕ್ರಮಣಕ್ಕೆ ಕಾರಣಗಳಾಗಿವೆ. ಇತಿಹಾಸದ ಮಹತ್ವವನ್ನು ಅರಿಯದೆ ಸ್ಮಾರಕದ ಸುತ್ತಮುತ್ತಲಿನ ಪ್ರದೇಶವನ್ನು ಸಾಮಾನ್ಯ ಭೂಮಿಯಂತೆ ಪರಿಗಣಿಸುವ ಪ್ರವೃತ್ತಿಯೂ ಕಂಡುಬರುತ್ತದೆ. ಒಮ್ಮೆ ನಾಶವಾದ ಅಥವಾ ಬದಲಾದ ಪಾರಂಪರಿಕ ರಚನೆಯನ್ನು ಅದರ ಮೂಲ ಸ್ವರೂಪಕ್ಕೆ ಮರಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನೂ ಮತ್ತೆ ಮೂಲ ರಚನೆ ತರುವುದೆಂದರೆ ಒಡೆದ ಕನ್ನಡಿಯನ್ನು ಜೋಡಿಸುವ ಮೂರ್ಖತನವೇ ಸರಿ. ಅದಕ್ಕೇ ಯಾವ ತಾಣಗಳನ್ನೂ ಹಾಳು ಮಾಡದೇ ಸಂರಕ್ಷಿಸುವುದು ಬಹಳ ಮುಖ್ಯ.
ಈ ಸಮಸ್ಯೆ ಇಂದಿನದ್ದೇನಲ್ಲ. ಹಿಂದೆಯೂ ಕರ್ನಾಟಕದ ಕೇಂದ್ರ ಸಂರಕ್ಷಿತ ಸ್ಮಾರಕಗಳಲ್ಲಿ ಅತಿಕ್ರಮಣದ ಕುರಿತು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. 2011ರಲ್ಲಿ ರಾಜ್ಯದ 59 ಕೇಂದ್ರ ಸಂರಕ್ಷಿತ ಸ್ಮಾರಕಗಳಲ್ಲಿ ಅತಿಕ್ರಮಣ ಮತ್ತು ಅನಧಿಕೃತ ನಿರ್ಮಾಣಗಳಿರುವುದಾಗಿ ಕೇಂದ್ರ ಸರ್ಕಾರವೇ ಮಾಹಿತಿ ನೀಡಿತ್ತು. ಇದರಿಂದ ಸಮಸ್ಯೆ ದೀರ್ಘಕಾಲದಿಂದ ಮುಂದುವರಿದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬನ ಜವಾಬ್ದಾರಿ
ಸ್ಮಾರಕಗಳ ಸಂರಕ್ಷಣೆಯ ಜವಾಬ್ದಾರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಮಾತ್ರ ಸೀಮಿತವಾಗಿರಬಾರದು. ರಾಜ್ಯ ಸರ್ಕಾರ, ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆ, ಇತಿಹಾಸಕಾರರು, ಪುರಾತತ್ವ ತಜ್ಞರು ಹಾಗೂ ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ಅತಿಕ್ರಮಣದ ಗುರುತಿಸುವಿಕೆ, ಸ್ಮಾರಕಗಳ ಗಡಿಗಳ ಸ್ಪಷ್ಟ ದಾಖಲೀಕರಣ, ನಿಯಮಬಾಹಿರ ನಿರ್ಮಾಣಗಳ ವಿರುದ್ಧ ಕ್ರಮ ಮತ್ತು ನಿರಂತರ ಮೇಲ್ವಿಚಾರಣೆ ಅತ್ಯಗತ್ಯ. ಸಂರಕ್ಷಣಾ ಕಾರ್ಯದಲ್ಲಿ ಸ್ಥಳೀಯ ಜನರ ಸಹಭಾಗಿತ್ವವೂ ಮಹತ್ವದ ಪಾತ್ರ ವಹಿಸುತ್ತದೆ.
ಇತಿಹಾಸವನ್ನು ಉಳಿಸುವುದು ಎಂದರೆ ಕೇವಲ ಗತಕಾಲವನ್ನು ನೆನಪಿಸಿಕೊಳ್ಳುವುದಲ್ಲ; ಭವಿಷ್ಯದ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಗುರುತನ್ನು ಹಸ್ತಾಂತರಿಸುವುದು. ಇಂದು ನಾವು ನಿರ್ಲಕ್ಷಿಸುವ ಒಂದು ಸ್ಮಾರಕ ನಾಳೆ ಇತಿಹಾಸದ ಪುಸ್ತಕದಲ್ಲಿ ಕೇವಲ ಒಂದು ಸಾಲಿನ ಉಲ್ಲೇಖವಾಗಿ ಉಳಿಯಬಹುದು. ಅದರ ಗೋಡೆಗಳು, ಶಿಲ್ಪಗಳು, ಶಾಸನಗಳು ಮತ್ತು ವಾಸ್ತುಶಿಲ್ಪದ ವೈಶಿಷ್ಟ್ಯಗಳು ನಾಶವಾದರೆ, ಅವುಗಳೊಂದಿಗೆ ಅಳಿಸಿಹೋಗುವುದು ನಮ್ಮ ನಾಡಿನ ಹೆಮ್ಮೆಯ ಅಧ್ಯಾಯ ಸಹ ಹೌದು.
ಕರ್ನಾಟಕದ 60 ಸಂರಕ್ಷಿತ ಸ್ಮಾರಕಗಳು ಅತಿಕ್ರಮಣದ ಸವಾಲನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಅವುಗಳನ್ನು ರಕ್ಷಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಇತಿಹಾಸದ ಕುರುಹುಗಳನ್ನು ಉಳಿಸುವ ಮೂಲಕವೇ ನಾವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿಡಲು ಸಾಧ್ಯ.
ರಾಜ್ಯ – ಅತಿಕ್ರಮಣ ತಾಣಗಳ ಸಂಖ್ಯೆ
ಉತ್ತರ ಪ್ರದೇಶ – 78
ತಮಿಳುನಾಡು – 72
ಕರ್ನಾಟಕ – 60
ಮಹಾರಾಷ್ಟ್ರ – 49
ರಾಜಸ್ಥಾನ – 30
2016ರ ವರದಿಯ ಪ್ರಕಾರ ಕರ್ನಾಟಕದಲ್ಲಿ ಅತಿಕ್ರಮಣ ತಾಣಗಳ ಸಂಖ್ಯೆ
ವಿಜಯಪುರ – 53
ಬೀದರ್ – 2
ಚಾಮರಾಜನಗರ – 1
ಕಲಬುರಗಿ – 1
