ತೆಲುಗು ಚಿತ್ರರಂಗದಲ್ಲಿ ಅಪಾರ ಮೆಚ್ಚುಗೆ ಪಡೆದ ಮಿಸ್ಟಿಕ್ ಥ್ರಿಲ್ಲರ್ ಸರಣಿಯ ಬಹುನಿರೀಕ್ಷಿತ ಮೂರನೇ ಭಾಗ ‘ಪೊಲಿಮೇರ 3’ ಸಿನಿಮಾದಿಂದ ವಿಶೇಷ ಅಪ್ಡೇಟ್ ಹೊರಬಿದ್ದಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಪ್ರಮುಖ ಪಾತ್ರಧಾರಿಯ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಹುಭಾಷಾ ನಟ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಅವರು ಈ ಚಿತ್ರದಲ್ಲಿ ‘ವಿರಾವಿ’ (Viraavi) ಎಂಬ ಶಕ್ತಿಶಾಲಿ ಹಾಗೂ ರೋಚಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಮೊದಲ ನೋಟದ ಗ್ಲಿಂಪ್ಸ್ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ನಿರ್ದೇಶಕ ಡಾ. ಅನಿಲ್ ವಿಶ್ವನಾಥ್ ಈ ಬಾರಿ ‘ಪೊಲಿಮೇರ’ ಜಗತ್ತನ್ನು ಮತ್ತಷ್ಟು ವಿಶಾಲವಾಗಿ ಕಟ್ಟಿಕೊಡಲು ಸಜ್ಜಾಗಿದ್ದು, ಚಿತ್ರವನ್ನು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ತರಲು ಸಿದ್ಧತೆ ನಡೆಸಿದ್ದಾರೆ.
ಬಿಡುಗಡೆಯಾಗಿರುವ ಗ್ಲಿಂಪ್ಸ್ ಅತ್ಯಂತ ನಿಗೂಢ ಹಾಗೂ ಅತೀಂದ್ರಿಯ ವಾತಾವರಣದೊಂದಿಗೆ ತೆರೆದುಕೊಳ್ಳುತ್ತದೆ. ದೇವಸ್ಥಾನದ ಕತ್ತಲೆಯ ಕೋಣೆಗಳು, ಅಮಾವಾಸ್ಯೆಯ ಕರಾಳ ರಾತ್ರಿ, ವಿಷ್ಣುವಿನಿಂದ ಶಿವನಿಗೆ ಬದಲಾಗುವ ವಿಸ್ಮಯಕಾರಿ ಪರಿವರ್ತನೆ ಮತ್ತು ಅನಂತ ಪದ್ಮನಾಭ ಸ್ವಾಮಿಯ ದೈವಿಕ ದರ್ಶನದ ದೃಶ್ಯಗಳು ವೀಕ್ಷಕರಿಗೆ ಮೈಜುಮ್ಮೆನಿಸುವ ಅನುಭವ ನೀಡುತ್ತವೆ. ಆಧ್ಯಾತ್ಮಿಕ ಅಂಶಗಳು ಹಾಗೂ ನಿಗೂಢತೆಯ ಸಮ್ಮಿಶ್ರಣದ ಬೆನ್ನಲ್ಲೇ, ನಿರ್ದೇಶಕರು ಕಥೆಯನ್ನು ‘ಪೊಲಿಮೇರ’ದ ಅಸಲಿ ಕರಾಳ ಜಗತ್ತಿಗೆ ತಿರುಗಿಸುತ್ತಾರೆ. ಅಲ್ಲಿ ಮುಖ್ಯಪಾತ್ರಧಾರಿ ಕೊಮರಯ್ಯನಾಗಿ ಸತ್ಯಂ ರಾಜೇಶ್ ವಾಮಾಚಾರ ನಡೆಸುವ ಭೀಕರ ದೃಶ್ಯಗಳು ಎದುರಾಗಿ, ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತವೆ.
ಈ ನಿಗೂಢ ಕ್ಷಣಗಳ ಬೆನ್ನಲ್ಲೇ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ‘ವಿರಾವಿ’ ಪಾತ್ರದ ಭರ್ಜರಿ ಎಂಟ್ರಿಯಾಗುತ್ತದೆ. ಕೈಯಲ್ಲಿ ರಕ್ತಸಿಕ್ತ ಖಡ್ಗ ಹಿಡಿದು, ಗಂಭೀರ ಮುಖಭಾವ ಹಾಗೂ ಕಣ್ಣುಗಳಲ್ಲಿ ತೀಕ್ಷ್ಣ ನೋಟ ಬೀರುವ ಯೋಧನ ಅವತಾರದಲ್ಲಿ ಅರ್ಜುನ್ ಸರ್ಜಾ ಎಂಟ್ರಿ ಕೊಟ್ಟಿದ್ದಾರೆ. ಅವರ ಪವರ್ ಫುಲ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ವಿಶಿಷ್ಟ ಮ್ಯಾನರಿಸಂ ಈ ಗ್ಲಿಂಪ್ಸ್ನ ಮುಖ್ಯ ಹೈಲೈಟ್ ಆಗಿ ಮೂಡಿಬಂದಿದೆ. ಕರಾಳ ವಾಮಾಚಾರದ ಪ್ರಪಂಚದಿಂದ ವೀರ ಯೋಧನ ಆ್ಯಕ್ಷನ್ ಮೂಡ್ಗೆ ಕಥೆ ಜಿಗಿಯುವ ಪರಿ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದ್ದು, ಚಿತ್ರದಲ್ಲಿ ಅವರ ಪಾತ್ರದ ಮಹತ್ವವೇನು ಎಂಬ ಚರ್ಚೆ ಆರಂಭವಾಗಿದೆ.
ದೃಶ್ಯಗಳಿಗೆ ಪೂರಕವಾಗಿರುವ ಸಿದ್ಧಾರ್ಥ್ ಅವರ ಛಾಯಾಗ್ರಹಣ ಹಾಗೂ ಕೃಷ್ಣ ಪ್ರಸಾದ್ ಅವರ ಹಿನ್ನೆಲೆ ಸಂಗೀತ ಈ ಗ್ಲಿಂಪ್ಸ್ನ ತೀವ್ರತೆಯನ್ನು ಹೆಚ್ಚಿಸಿವೆ. ‘ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ಎಲ್ಪಿ’ (ಏಷ್ಯನ್ ಗ್ರೂಪ್) ಸಂಸ್ಥೆಯ ಭರತ್ ನಾರಂಗ್ ಸಹಯೋಗದಲ್ಲಿ ‘ವಂಶಿ ನಂದಿಪಾಟಿ ಎಂಟರ್ಟೈನ್ಮೆಂಟ್ಸ್’ ಬ್ಯಾನರ್ ಅಡಿಯಲ್ಲಿ ಯಶಸ್ವಿ ನಿರ್ಮಾಪಕ ವಂಶಿ ನಂದಿಪಾಟಿ ಈ ಚಿತ್ರವನ್ನು ಅದ್ದೂರಿ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಒಟಿಟಿ ಮೂಲಕ ಬಂದು ಸಂಚಲನ ಸೃಷ್ಟಿಸಿದ್ದ ‘ಮಾ ಊರಿ ಪೊಲಿಮೇರ’ ಮತ್ತು ಚಿತ್ರಮಂದಿರಗಳಲ್ಲಿ ಬ್ಲಾಕ್ಬಸ್ಟರ್ ಎನಿಸಿಕೊಂಡ ‘ಪೊಲಿಮೇರ 2’ ಯಶಸ್ಸಿನ ಬಳಿಕ, ಈಗ ಮೂರನೇ ಭಾಗವು ಅರ್ಜುನ್ ಸರ್ಜಾ ಅವರ ಎಂಟ್ರಿಯಿಂದಾಗಿ ದೊಡ್ಡ ಮಟ್ಟದ ಹೈಪ್ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ಸತ್ಯಂ ರಾಜೇಶ್, ಕಾಮಾಕ್ಷಿ ಭಾಸ್ಕರ್ಲ, ಬಾಲಾದಿತ್ಯ, ಗೆಟಪ್ ಶ್ರೀನು, ರಾಕೆಂದು ಮೌಳಿ ಸೇರಿದಂತೆ ಬಲಿಷ್ಠ ತಾರಾಬಳಗವಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆಯನ್ನೂ ಹೊತ್ತಿರುವ ನಿರ್ದೇಶಕ ಡಾ. ಅನಿಲ್ ವಿಶ್ವನಾಥ್, ಈ ಸೂಪರ್ನ್ಯಾಚುರಲ್ ಥ್ರಿಲ್ಲರ್ ಅನ್ನು ಇಡೀ ಭಾರತೀಯ ಚಿತ್ರರಂಗವೇ ಗಮನಿಸುವಂತೆ ರೂಪಿಸಿದ್ದಾರೆ. ‘ವಿರಾವಿ’ ಪಾತ್ರದ ಪ್ರಭಾವಶಾಲಿ ಲುಕ್ ಬಿಡುಗಡೆಯಾದ ಬೆನ್ನಲ್ಲೇ ಸಿನಿರಸಿಕರಲ್ಲಿ ‘ಪೊಲಿಮೇರ 3’ ಮೇಲಿನ ನಿರೀಕ್ಷೆಗಳು ಗಗನಕ್ಕೇರಿದ್ದು, ಶೀಘ್ರದಲ್ಲೇ ನಾಲ್ಕೂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.
