– ಟ್ರಂಪ್ ಪಕ್ಷದ ಪ್ರಚಾರಕ್ಕೆ 4,400 ಕೋಟಿ ಸುರಿದಿದ್ದ ಬಿಲಿಯನೇರ್
– ಅಮೆರಿಕ ಸಂಸತ್ನಲ್ಲಿ ಡೆಮಾಕ್ರಟಿಕ್ಗಳಿಗೆ ಬಹುಮತ
ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ(US Midterm Elections) ರಿಪಬ್ಲಿಕನ್ ಪಕ್ಷವು ಭಾರಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ, ಆ ಪಕ್ಷಕ್ಕೆ ಮತ ನೀಡುವಂತೆ ಅಮೆರಿಕನ್ನರಲ್ಲಿ ಮನವಿ ಮಾಡಿದ್ದ ತಮ್ಮ ಹಳೆಯ ಸಾಮಾಜಿಕ ಜಾಲತಾಣ ಪೋಸ್ಟ್ಗಳನ್ನು ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್(Elon Musk) ಡಿಲೀಟ್ ಮಾಡಲು ಆರಂಭಿಸಿದ್ದಾರೆ.
ಅಕ್ಟೋಬರ್ 29 ರಂದು ಮಸ್ಕ್ ಹಂಚಿಕೊಂಡಿದ್ದ ಮತ್ತು ತಮ್ಮ ಪ್ರೊಫೈಲ್ನಲ್ಲಿ ಪಿನ್ ಮಾಡಿದ್ದ ಪ್ರಮುಖ ಪೋಸ್ಟ್ ಒಂದನ್ನು ಬುಧವಾರ ಮುಂಜಾನೆ ಅವರು ತೆಗೆದುಹಾಕಿದ್ದಾರೆ. ಅದರಲ್ಲಿ ರಿಪಬ್ಲಿಕನ್ ಸೆನೆಟರ್ಗಳಿಗೆ ಮತ ನೀಡುವಂತೆ ಅವರು ಕೋರಿದ್ದರು.
ಟೆಕ್ಸಾಸ್ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೇಮ್ಸ್ ತಲಾರಿಕೊ ಗೆಲುವು ಸಾಧಿಸಿದ ಬೆನ್ನಲ್ಲೇ ಈ ಪೋಸ್ಟ್ ಕಣ್ಮರೆಯಾಗಿದೆ. ಮಸ್ಕ್ ಅವರ ಬಲವಾದ ಬೆಂಬಲ ಹೊಂದಿದ್ದ ರಿಪಬ್ಲಿಕನ್ ಅಭ್ಯರ್ಥಿ ಕೆನ್ ಪಾಕ್ಸ್ಟನ್ಗೆ ಈ ಫಲಿತಾಂಶ ತೀವ್ರ ಸೋಲನ್ನು ತಂದೊಡ್ಡಿತ್ತು.
Elon deleting all his tweets 🤣🤣🤣 https://t.co/36OkSXUlKZ
— Alex 🥷 (@Shilllin) November 4, 2026
ಮಸ್ಕ್ ಪೋಸ್ಟ್ಗಳನ್ನು ಡಿಲೀಟ್ ಮಾಡುತ್ತಿರುವುದನ್ನು ಎಕ್ಸ್ ಬಳಕೆದಾರರು ತಕ್ಷಣವೇ ಗುರುತಿಸಿದ್ದಾರೆ. ಬಳಕೆದಾರರೊಬ್ಬರು “ಮಸ್ಕ್ ತಮ್ಮ ಚುನಾವಣೆ ಸಂಬಂಧಿತ ಪೋಸ್ಟ್ಗಳನ್ನು ಅಳಿಸಿಹಾಕುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದಾಗ, ಮಸ್ಕ್ ಅವರದೇ ಎಐ ಚಾಟ್ಬಾಟ್ ಗ್ರೋಕ್ “ಹೌದು, ನಿಜ” ಎಂದು ಉತ್ತರಿಸಿದೆ. ಚುನಾವಣಾ ಫಲಿತಾಂಶಗಳಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ನಷ್ಟ ಉಂಟಾದ ನಂತರ ಮಸ್ಕ್ ತಮ್ಮ “Vote red today!” ಪೋಸ್ಟ್ ಅನ್ನು ತೆಗೆದುಹಾಕಿದ್ದಾರೆ ಎಂದು ಗ್ರೋಕ್ ಸ್ಪಷ್ಟಪಡಿಸಿದೆ.
ಮಂಗಳವಾರ ನಡೆದ ಚುನಾವಣೆಯ ಬಗ್ಗೆ ನೇರವಾಗಿ ಹೆಚ್ಚು ಮಾತನಾಡದ ಮಸ್ಕ್, ಬುಧವಾರ ಮುಂಜಾನೆ ಫಲಿತಾಂಶಗಳನ್ನು ವಿಶ್ಲೇಷಿಸುವ ಹಲವು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ವ್ಯಂಗ್ಯವಾಗಿ, “ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ನನ್ನ ಬಾಹ್ಯಾಕಾಶ ಲೇಸರ್ಗಳು ಈ ಬಾರಿ ಕೆಲಸ ಮಾಡಲಿಲ್ಲ ಅನ್ನಿಸುತ್ತೆ” ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ, “ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ಗಳನ್ನು ನಿರ್ಮಿಸುವುದು ಈಗ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ” ಎಂದೂ ಅವರು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಚುನಾವಣೆಯಲ್ಲಿ ಸೋತರೂ ವೀಟೋ ಬಳಸಿ ಡೆಮಾಕ್ರಟ್ಗಳನ್ನು ಆಟ ಆಡಿಸಲು ಮುಂದಾದ ಟ್ರಂಪ್!
4,400 ಕೋಟಿ ಸುರಿದಿದ್ದ ಮಸ್ಕ್
ಫೆಡರಲ್ ಚುನಾವಣಾ ಆಯೋಗದ (FEC) ದಾಖಲೆಗಳ ಪ್ರಕಾರ, ಈ ಮಧ್ಯಂತರ ಚುನಾವಣಾ ಅವಧಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳು ಮತ್ತು ಸಂಪ್ರದಾಯವಾದಿ ಗುಂಪುಗಳನ್ನು ಬೆಂಬಲಿಸಲು ಮಸ್ಕ್ ಕನಿಷ್ಠ 458 ಮಿಲಿಯನ್ ಡಾಲರ್ (ಸುಮಾರು 4,400 ಕೋಟಿ ರೂ.) ಹಣವನ್ನು ಖರ್ಚು ಮಾಡಿದ್ದರು. ಕಾಂಗ್ರೆಸ್ನಲ್ಲಿ ರಿಪಬ್ಲಿಕನ್ ಪಕ್ಷದ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವರು ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಭಾರಿ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದರು.
ಈ ಪೈಕಿ ಟೆಕ್ಸಾಸ್ ಸೆನೆಟ್ ಚುನಾವಣೆ, ಸೆನೆಟ್ ಲೀಡರ್ಶಿಪ್ ಫಂಡ್ ಹಾಗೂ ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಅಯೋವಾದ ಪ್ರಮುಖ ಹೌಸ್ ಕ್ಷೇತ್ರಗಳಿಗೆ ಹೆಚ್ಚಿನ ದೇಣಿಗೆ ಹರಿದುಬಂದಿತ್ತು. ಸುಮಾರು 216 ಮಿಲಿಯನ್ ಡಾಲರ್ ಮೊತ್ತವನ್ನು ಮಸ್ಕ್ ನೇರವಾಗಿ ತಮ್ಮದೇ ‘ಅಮೆರಿಕ ಪಿಎಸಿ’ಗೆ ನೀಡಿದ್ದರು. ಈ ಹಣವನ್ನು ಮತದಾರರ ಸಂಪರ್ಕ, ಪ್ರಚಾರ ಕಾರ್ಯಕರ್ತರು ಮತ್ತು ಡಿಜಿಟಲ್ ಜಾಹೀರಾತುಗಳಿಗಾಗಿ ಬಳಸಲಾಗಿತ್ತು.
2.5 ಲಕ್ಷ ಕೋಟಿಗೂ ಅಧಿಕ ನಷ್ಟ
ಚುನಾವಣಾ ಹಿನ್ನಡೆಯ ಹೊಡೆತವು ಮಸ್ಕ್ ಅವರ ಸಂಪತ್ತಿನ ಮೇಲೂ ಭಾರಿ ಪರಿಣಾಮ ಬೀರಿದೆ. ಬುಧವಾರ ಅವರ ನಿವ್ವಳ ಮೌಲ್ಯ 878 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದರೂ, ಅವರ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಷೇರುಗಳು ಕುಸಿತ ಕಂಡಿದ್ದರಿಂದ ಒಂದೇ ದಿನದಲ್ಲಿ 23.7 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದರು.
ಕಾಂಗ್ರೆಸ್ನಲ್ಲಿ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದರೆ ಡೇಟಾ ಸೆಂಟರ್ಗಳ ನಿರ್ಮಾಣ ನಿಯಮಗಳು ಮತ್ತು ಅನುಮೋದನೆ ಪ್ರಕ್ರಿಯೆಗಳು ವಿಳಂಬವಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದ್ದೇ ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಒಟ್ಟಾರೆಯಾಗಿ ಮಸ್ಕ್ ತಮ್ಮ ಆಸ್ತಿಯಲ್ಲಿ ಸುಮಾರು 30 ಬಿಲಿಯನ್ ಡಾಲರ್ (ಸುಮಾರು 2.7 ಲಕ್ಷ ಕೋಟಿ ರೂ.ಗೂ ಹೆಚ್ಚು) ಕಳೆದುಕೊಂಡಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
