– ಬೆಂಗಳೂರಿನ ರಾಜಾಜಿನಗರದಲ್ಲಿ ಬೆಚ್ಚಿಬೀಳಿಸುವ ಕೃತ್ಯ
– ಪತ್ನಿಗೆ ಬೆಂಬಲ ನೀಡಿದ್ದಕ್ಕೆ ಸಿಟ್ಟು
ಬೆಂಗಳೂರು: ದಾಂಪತ್ಯ ಕಲಹದ ಸಂದರ್ಭದಲ್ಲಿ ಪತ್ನಿಯ ಪರ ನಿಂತಿದ್ದಕ್ಕೆ ಇಂದು ಶೇಖರ್ 7 ಜನರನ್ನು ರುಬ್ಬುವ ಕಲ್ಲಿನಿಂದ ಹತ್ಯೆ ಮಾಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಸುಮಾರು 20 ವರ್ಷಗಳ ಹಿಂದೆ ಇಂದು ಶೇಖರ್(Shekar) ಮತ್ತು ಸುನೀತಾ ವಿವಾಹವಾಗಿದ್ದು, ದಂಪತಿ ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ನೆಲೆಸಿದ್ದರು. ಆದರೆ ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿ, ನಿರಂತರ ಜಗಳಗಳು ನಡೆಯುತ್ತಿದ್ದವು. ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಸಲಾಯಿತಾದರೂ ಕಲಹ ಬಗೆಹರಿದಿರಲಿಲ್ಲ.
ಈ ಜಗಳಗಳಲ್ಲಿ ಪತ್ನಿ ಸುನೀತಾಗೆ(Sunitha) ಆಕೆಯ ತಾಯಿ ಮತ್ತು ಸಹೋದರರು ಬೆಂಬಲವಾಗಿ ನಿಲ್ಲುತ್ತಿದ್ದುದು ಇಂದುಶೇಖರ್ನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಪತ್ನಿ ಶ್ರೀರಾಮಪುರದಲ್ಲಿದ್ದ ತನ್ನ ತವರು ಮನೆಗೆ ಹೋಗುವುದನ್ನು ಆತ ಕಟ್ಟುನಿಟ್ಟಾಗಿ ನಿರ್ಬಂಧಿಸಿದ್ದರೂ, ಆಕೆ ತವರು ಮನೆಯ ನಂಟನ್ನು ಮುಂದುವರಿಸಿದ್ದರು. ಇದರಿಂದಾಗಿ ಪತ್ನಿಯ ಕುಟುಂಬಸ್ಥರೇ ತನ್ನ ನೆಮ್ಮದಿಯ ಬದುಕಿಗೆ ಕಂಟಕವಾಗಿದ್ದಾರೆ ಎಂದು ದ್ವೇಷ ಬೆಳೆಸಿಕೊಂಡ ಆತ, ಎಲ್ಲರನ್ನೂ ಹತ್ಯೆ ಮಾಡಲು ಸಂಚು ರೂಪಿಸಿ ಈ ದುಷ್ಕೃತ್ಯ ಎಸಗಿದ್ದಾನೆ.
ಒಬ್ಬೊಬ್ಬರನ್ನೇ ಕರೆಸಿ ಹತ್ಯೆ
ಪತ್ನಿ ಸುನಿತಾ ಮೇಲಿನ ಸಿಟ್ಟಿಗೆ ಆಕೆಯ ಕುಟುಂಬದ ಏಳು ಮಂದಿಯನ್ನು ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಶೇಖರ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಹೆಂಡ್ತಿ ಮೇಲಿನ ಸಿಟ್ಟಿಗೆ ಬೆಂಗ್ಳೂರಲ್ಲಿ ಏಳು ಮರ್ಡರ್ – ಕೊಲೆಗೈದು ನಂದಿ ಬೆಟ್ಟದಲ್ಲಿ ಮೃತದೇಹ ಎಸೆದಿರುವ ಹಂತಕ
ಮರುದಿನ ನೆರೆಹೊರೆಯವರಿಗೆ ಅನುಮಾನ ಬಾರದಂತೆ, “ಸುನಿತಾ ತನ್ನ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಳೆ” ಎಂದು ಸುಳ್ಳು ಹೇಳಿ ನಂಬಿಸಿದ್ದಲ್ಲದೆ, ಆಕೆಯ ಕುಟುಂಬದವರಿಗೂ ಸಂಶಯ ಬಾರದಂತೆ ಆಕೆಯ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ್ದಾನೆ.
ಇದಾದ ನಂತರ ಮನೆಯಲ್ಲಿ ಮದ್ಯದ ಪಾರ್ಟಿ ಮಾಡುವ ನೆಪವೊಡ್ಡಿ ತನ್ನ ಭಾವಮೈದುನರಾದ ಶಿವಕುಮಾರ್ ಹಾಗೂ ಶಂಕರ್ರನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ. ಬಳಿಕ ಶಂಕರ್ ಪತ್ನಿ ನಳಿನಿ ಹಾಗೂ ಶಿವಕುಮಾರ್ ಪತ್ನಿ ದಿವ್ಯಾರನ್ನು ಮನೆಗೆ ಕರೆಸಿ ಕೊಂದಿದ್ದಾನೆ. ತದನಂತರ ಅತ್ತೆ ರೂಪಾವತಿ ಹಾಗೂ ಶಂಕರ್ ಪುತ್ರ ಪುನೀತ್ನನ್ನು ಸಹ ಹತ್ಯೆಗೈದಿದ್ದಾನೆ.
ಹೀಗೆ ಪ್ರತಿಯೊಬ್ಬರನ್ನೂ ಒಬ್ಬೊಬ್ಬರಾಗಿಯೇ ಮನೆಗೆ ಕರೆಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ, ನಂತರ ಎಲ್ಲಾ ಮೃತದೇಹಗಳನ್ನು ಬೇರೆ ಬೇರೆ ಕಡೆ ತೆಗೆದುಕೊಂಡು ಹೋಗಿ ಬಿಸಾಡಿದ್ದಾನೆ.
ಪೊಲೀಸರು ಶೇಖರ್ನನ್ನು ವಿಚಾರಣೆಗೆ ಒಳಪಡಿಸುತ್ತಿದ್ದು ಮತ್ತಷ್ಟು ವಿವರಗಳು ಲಭ್ಯವಾಗಬೇಕಿದೆ.
