– ನಾಳೆಯಿಂದ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಹಸಿರು ನಿಶಾನೆ
ಬೆಳಗಾವಿ: ಕಬ್ಬಿನ ದರ ನಿಗದಿ ವಿಚಾರವಾಗಿ ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಕಬ್ಬು ಬೆಳೆಗಾರರ ಹೋರಾಟವನ್ನು ವಾಪಸ್ ಪಡೆಯಲಾಗಿದೆ ಎಂದು ರೈತ ಮುಖಂಡ ಚೂನಪ್ಪ ಪೂಜೇರಿ ಘೋಷಿಸಿದ್ದಾರೆ.
ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಬೆಳಗಾವಿಯ ಪೊಲೀಸ್ ಕ್ವಾಟರ್ಸ್ನಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ಮಾತನಾಡಿದ ಅವರು, ರೈತರ ಹೋರಾಟದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು. ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಆರಂಭವಾಗಲಿದ್ದು, ಯಾವುದೇ ರೈತರು ಅಥವಾ ಸಂಘಟನೆಗಳು ಕಾರ್ಖಾನೆಗಳ ಆರಂಭಕ್ಕೆ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು.
ಕಳೆದ ಹನ್ನೆರಡು ದಿನಗಳಿಂದ ಗುರ್ಲಾಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನೂ ಹಿಂಪಡೆಯಲಾಗಿದೆ. ರೈತರ ಬೇಡಿಕೆಗಳ ಕುರಿತು ಜಿಲ್ಲಾಡಳಿತ ಹಾಗೂ ಕಾರ್ಖಾನೆ ಮಾಲೀಕರೊಂದಿಗೆ ನಡೆದ ಮಾತುಕತೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ ಗುರ್ಲಾಪುರದಲ್ಲಿ ಎಲ್ಲ ರೈತರು ಸಭೆ ಸೇರಲಿದ್ದು, ಹೋರಾಟದ ಮುಂದಿನ ಹಂತ ಹಾಗೂ ಸರ್ಕಾರದ ಮುಂದಿನ ನಿರ್ಧಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
3,800 ರೂ. ಕೇಳಿದ್ದ ರೈತರು, 3,600 ದರಕ್ಕೆ ಒಪ್ಪಿಗೆ
ಕಬ್ಬಿನ ಪ್ರತಿ ಟನ್ಗೆ 3,800 ರೂ. ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಧ್ಯಸ್ಥಿಕೆ ವಹಿಸಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,600 ದರ ನೀಡಲು ಒಪ್ಪಿಗೆ ದೊರೆತಿದೆ ಎಂದು ಚೂನಪ್ಪ ಪೂಜಾರಿ ತಿಳಿಸಿದರು.
ನಿಗದಿಪಡಿಸಿರುವ 3,600 ದರ ರೈತರಿಗೆ ತೃಪ್ತಿ ತಂದಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೋರಾಟವನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಮಾತುಕತೆಯ ಮೂಲಕ ರೈತರ ಬೇಡಿಕೆಗಳಿಗೆ ಸ್ಪಂದನೆ ದೊರೆತಿರುವುದು ಹೋರಾಟದ ಮೊದಲ ಹಂತದ ಜಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಕ್ಕರೆ ಮಾರಾಟದ ಲಾಭಾಂಶದಲ್ಲೂ ರೈತರಿಗೆ ಪಾಲು
ಈ ಬಾರಿಯ ಹೋರಾಟದಲ್ಲಿ ರೈತರಿಗೆ ಮತ್ತೊಂದು ಮಹತ್ವದ ಅಂಶದಲ್ಲಿ ಯಶಸ್ಸು ದೊರೆತಿದೆ ಎಂದು ಚೂನಪ್ಪ ಪೂಜಾರಿ ಹೇಳಿದರು. ಇದೇ ಮೊದಲ ಬಾರಿಗೆ ಸಕ್ಕರೆ ಮಾರಾಟದಿಂದ ದೊರೆಯುವ ಹೆಚ್ಚುವರಿ ಲಾಭಾಂಶದಲ್ಲಿಯೂ ರೈತರಿಗೆ ಪಾಲು ನೀಡುವ ವಿಚಾರಕ್ಕೆ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದರು.
ಸಕ್ಕರೆಯ ಮಾರಾಟ ಬೆಲೆ ಹೆಚ್ಚಾದ ಸಂದರ್ಭದಲ್ಲಿ ಅದರ ಲಾಭದಲ್ಲಿ ರೈತರಿಗೂ ಹೆಚ್ಚುವರಿ ಹಣ ಸಿಗುವ ವ್ಯವಸ್ಥೆಗೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ಈ ಹಿಂದೆ ಸಕ್ಕರೆ ಮಾರಾಟದ ಲಾಭಾಂಶದಲ್ಲಿ ರೈತರಿಗೆ ಪಾಲು ದೊರೆಯುತ್ತಿರಲಿಲ್ಲ. ಆದರೆ ಈ ಬಾರಿ ನಡೆದ ಹೋರಾಟದ ಪರಿಣಾಮವಾಗಿ ಈ ಬೇಡಿಕೆಗೂ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಸಕ್ಕರೆಯ ಮಾರಾಟದ ಬೆಲೆ ಹಾಗೂ ಅದಕ್ಕೆ ಅನುಗುಣವಾಗಿ ರೈತರಿಗೆ ದೊರೆಯುವ ಹೆಚ್ಚುವರಿ ಮೊತ್ತದ ಕುರಿತು ಒಪ್ಪಂದದಲ್ಲಿ ಸ್ಪಷ್ಟತೆ ಇರಬೇಕೆಂಬುದು ರೈತರ ನಿಲುವಾಗಿದೆ ಎಂದು ತಿಳಿಸಿದರು.
1,000 ರೂ. ಪ್ರೋತ್ಸಾಹಧನಕ್ಕಾಗಿ ಹೋರಾಟ ಮುಂದುವರಿಕೆ
ಇನ್ನು ಪ್ರತಿ ಟನ್ ಕಬ್ಬಿಗೆ 3,600 ದರ ನಿಗದಿಯಾದರೂ ರೈತರ ಹೋರಾಟ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಚೂನಪ್ಪ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 1,000 ರೂ. ಪ್ರೋತ್ಸಾಹಧನ ಘೋಷಣೆ ಮಾಡುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ರೈತರ ಹಿತದೃಷ್ಟಿಯಿಂದ ಪ್ರತಿ ಟನ್ ಕಬ್ಬಿಗೆ 1,000 ರೂ. ಪ್ರೋತ್ಸಾಹಧನ ನೀಡುವ ಕುರಿತು ತಕ್ಷಣ ಘೋಷಣೆ ಮಾಡಬೇಕು. ರೈತರ ಈ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿದರೆ ಮುಂಬರುವ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ನಾಳೆಯಿಂದ ಕಾರ್ಖಾನೆ ಆರಂಭ – ರೈತರಿಗೆ ಮನವಿ
ಸದ್ಯಕ್ಕೆ ಹೋರಾಟವನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಲಿವೆ. ಆದ್ದರಿಂದ ರೈತರು, ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಖಾನೆಗಳ ಆರಂಭಕ್ಕೆ ಯಾವುದೇ ರೀತಿಯ ಅಡ್ಡಿಪಡಿಸಬಾರದು ಎಂದು ಚೂನಪ್ಪ ಪೂಜೇರಿ ಮನವಿ ಮಾಡಿದರು.
ನಾಳೆ ಗುರ್ಲಾಪುರದಲ್ಲಿ ರೈತರ ಸಭೆ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳ ರೈತ ಮುಖಂಡರೊಂದಿಗೆ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು. 3,600 ದರ ನಿಗದಿ ಹಾಗೂ ಸಕ್ಕರೆ ಮಾರಾಟದ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡುವ ವಿಚಾರದಲ್ಲಿ ಮೊದಲ ಹಂತದ ಜಯ ದೊರೆತಿದೆ. ಆದರೆ ಸರ್ಕಾರದ 1,000 ರೂ. ಪ್ರೋತ್ಸಾಹಧನದ ಘೋಷಣೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ಚೂನಪ್ಪ ಪೂಜೇರಿ ಸ್ಪಷ್ಟಪಡಿಸಿದ್ದಾರೆ.
