ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ಬೆನ್ನುನೋವಿಗೆ ಫಿಸಿಯೋಥೆರಪಿ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸೆಷನ್ಸ್ ಕೋರ್ಟ್ನಲ್ಲಿ ನಡೆಯಿತು.
ಈ ವೇಳೆ, ದರ್ಶನ್ ಪರ ವಕೀಲ ಹಷ್ಮತ್ ಪಾಷಾ ವಾದಿಸಿ, 12 ವರ್ಷಗಳಿಂದ ಬೆನ್ನು ನೋವಿದೆ. ಈಗಾಗಲೇ ಸ್ಟಿರಾಯ್ಡ್ ಇಂಜೆಕ್ಷನ್ ಪಡೆದುಕೊಂಡಿದ್ದಾರೆ. ಪದೇ ಪದೇ ಫಿಸಿಯೋಥೆರಪಿಯನ್ನು ಪಡೆಯುತ್ತಾ ಇದ್ದಾರೆ. ಈ ವರ್ಷ ಸೂಪರಿಂಡೆಂಟ್ಗೆ ಮನವಿ ಸಲ್ಲಿಸಿದ್ದರೂ ಇನ್ನೂ ಅವಕಾಶ ಕಲ್ಪಿಸಿಲ್ಲ ಅಂತ ವಿನಂತಿಸಿದರು. ಇದಕ್ಕೆ ಸರ್ಕಾರಿ ವಕೀಲರು ವಾದಕ್ಕೆ ಮತ್ತೊಂದು ದಿನ ಕೇಳಿದಾಗ ಹಷ್ಮತ್ ಪಾಷಾ ಆಕ್ಷೇಪಿಸಿದರು. ಕಳೆದ ವಾರದಿಂದ ವಿಚಾರಣೆಗೆ ಸಹಕಾರ ಮಾಡ್ತಿಲ್ಲ. ಅವರು ಗೈರಾಗಿದ್ದಾರೆ ಎಂದು ಬರೆದುಕೊಂಡು ಆದೇಶ ಮಾಡಿ. ದರ್ಶನ್ಗೆ ತಕ್ಷಣ ಫಿಸಿಯೋಥೆರಪಿ ಅವಕಾಶ ಅನಿವಾರ್ಯ ಇದೆ ಎಂದರು.
ಆದರೆ, ಎಸ್ಪಿಪಿಗೆ ವಾದ ಮಂಡಿಸಲು ಅವಕಾಶ ಕೊಟ್ಟ ಕೋರ್ಟ್, ನಾಳೆಗೆ ವಿಚಾರಣೆ ಮುಂದೂಡಿತು. ಮತ್ತೊಂದ್ಕಡೆ, ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಬಳಿಕ ಇತರೆ ಆರೋಪಿಗಳ ರಾಜಾತಿಥ್ಯದ ವೀಡಿಯೊ ವೈರಲ್ ಕೇಸಲ್ಲಿ ಧನ್ವೀರ್ಗೆ ಸಂಕಷ್ಟ ಎದುರಾಗಿದೆ. ಧನ್ವೀರ್ ಮೊಬೈಲ್ನಿಂದಲೇ ವಿಡಿಯೋ ವೈರಲ್ ಆಗಿದೆ ಅಂತ ಎಫ್ಎಸ್ಎಲ್ ರಿಪೋರ್ಟ್ ದೃಢಪಡಿಸಿದೆ.
ಈಗ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಯಲು ಮುಂದಾಗಿದೆ. ಇದರ ನಡುವೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗಿನ ಜಟಾಪಟಿ ಪ್ರಕರಣದಲ್ಲಿ ದೀಪಾವಳಿ ಮುಗಿದ ಬಳಿಕ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿರುವ ಧನ್ವೀರ್ಗೆ ಪೊಲೀಸರು ಅವಕಾಶ ಕೊಟಿದ್ದಾರೆ.
