– ರ್ಯಾಲಿ ಮುಂದೂಡುವಂತೆ ಮನವಿ ಮಾಡಿದ್ದ ವ್ಯಾಪಾರಿಗಳು
ನವದೆಹಲಿ: ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಇಂಡಿಯಾ ಬ್ಲಾಕ್ ರ್ಯಾಲಿಯಿಂದಾಗಿ ಸುಮಾರು 11,000 ಕೋಟಿ ರೂ. ವ್ಯವಹಾರ ನಷ್ಟವಾಗಿದೆ ಎಂದು ದೆಹಲಿಯ ವ್ಯಾಪಾರ ಮತ್ತು ಕೈಗಾರಿಕಾ ಮಂಡಳಿ (CTI) ಹೇಳಿದೆ.
ದೀಪಾವಳಿ ಹಬ್ಬ ಹಾಗೂ ಶಾಪಿಂಗ್ ಸಮಯದಲ್ಲಿ ರ್ಯಾಲಿ ನಡೆದಿದ್ದರಿಂದ ಸುತ್ತಮುತ್ತಲಿನ ಪ್ರಮುಖ ಮಾರುಕಟ್ಟೆಗಳ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ ಎಂದು ಸಂಘ ತಿಳಿಸಿದೆ. ನ. 1ರಂದು ದೆಹಲಿಯಲ್ಲಿ ಸುಮಾರು 11,000 ಕೋಟಿ ರೂ. ಮೌಲ್ಯದ ವ್ಯಾಪಾರ ವಹಿವಾಟು ನಷ್ಟವಾಗಿದೆ ಎಂದು CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ.
ಚಿಲ್ಲರೆ, ಸಗಟು ವ್ಯಾಪಾರಕ್ಕೆ 8,800 ಕೋಟಿ ರೂ. ನಷ್ಟ
CTI ನೀಡಿರುವ ಅಂದಾಜಿನ ಪ್ರಕಾರ, ಚಿಲ್ಲರೆ ಮತ್ತು ಸಗಟು ವ್ಯಾಪಾರ ಕ್ಷೇತ್ರದಲ್ಲಿ ಸುಮಾರು 8,800 ಕೋಟಿ ಮೌಲ್ಯದ ವಹಿವಾಟು ನಷ್ಟವಾಗಿದೆ. ರಾಮಲೀಲಾ ಮೈದಾನದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿತ್ತು ಎಂದು ಸಂಘ ಹೇಳಿದೆ.
ಕಾಶ್ಮೀರಿ ಗೇಟ್, ಚಾಂದಿನಿ ಚೌಕ್, ಚಾವ್ರಿ ಬಜಾರ್, ಖಾರಿ ಬಾವೊಲಿ, ಸದರ್ ಬಜಾರ್, ದರಿಯಾಗಂಜ್, ಕನ್ನಾಟ್ ಪ್ಲೇಸ್, ಪಾಲಿಕಾ ಬಜಾರ್, ಕರೋಲ್ ಬಾಗ್ ಸೇರಿದಂತೆ ಹಲವು ಪ್ರಮುಖ ಮಾರುಕಟ್ಟೆಗಳು ಅಂಗಡಿಗಳು ಮುಚ್ಚಿದ್ದವು. ಈ ಮಾರುಕಟ್ಟೆಗಳಲ್ಲಿ ಸುಮಾರು ಮೂರು ಲಕ್ಷ ಅಂಗಡಿಗಳಿದ್ದು, ಅವುಗಳಲ್ಲಿ 2.5 ಲಕ್ಷ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿದ್ದವು. ಇದರಿಂದ ಶೇ.80ರಷ್ಟು ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿತ್ತು ಎಂದು CTI ಅಂದಾಜಿಸಿದೆ.ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಕೇಸ್ – ನಿರೀಕ್ಷಣಾ ಜಾಮೀನಿಗೆ ಹೆಚ್ಡಿಕೆ ಪಿಆರ್ಒ ಪ್ರಜ್ವಲ್ ಪ್ರಸಾದ್ ಅರ್ಜಿ
ರ್ಯಾಲಿಯಿಂದಾಗಿ ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಚಟುವಟಿಕೆಗಳಿಗೂ ಅಡ್ಡಿಯಾಗಿದೆ. ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರಕುಗಳ ಚಲನೆ ಸ್ಥಗಿತಗೊಂಡಿದ್ದರಿಂದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ 1,500 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಿದೆ.
ಇನ್ನು ಹೋಟೆಲ್, ರೆಸ್ಟೋರೆಂಟ್ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಮಾರು 500 ಕೋಟಿ ರೂ. ನಷ್ಟವಾಗಿದೆ ಎಂದು CTI ತಿಳಿಸಿದೆ. ಕನ್ನಾಟ್ ಪ್ಲೇಸ್, ಕರೋಲ್ ಬಾಗ್, ಪಹರ್ಗಂಜ್, ಚಾಂದಿನಿ ಚೌಕ್ ಮತ್ತು ದರಿಯಾಗಂಜ್ ಪ್ರದೇಶಗಳಲ್ಲಿನ 2,000ಕ್ಕೂ ಹೆಚ್ಚು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಅತಿಥಿಗೃಹಗಳು ಮತ್ತು ಧಾಬಾಗಳಲ್ಲಿ ಬುಕಿಂಗ್ ರದ್ದಾಗಿತ್ತು ಎಂದು ಹೇಳಿದೆ.
हमने सब लोगों से कहा कि जब आप मार्च और महारैली के लिए यहां आएंगे, चीजें खरीदें, खरीदारी करें।
मगर, यहां Connaught Place में आते हुए हमें पता लगा कि BJP ने सारी की सारी दुकानें जबरदस्ती बंद करवा दी।
तो traders का नुकसान कौन कर रहा है, कैसे हो रहा है, यह आप जान लीजिए! https://t.co/zeB9kT05xO
— Rahul Gandhi (@RahulGandhi) November 1, 2026
ರ್ಯಾಲಿ ಮುಂದೂಡುವಂತೆ ಮನವಿ ಮಾಡಿದ್ದ ವ್ಯಾಪಾರಿಗಳು
ದೀಪಾವಳಿ ಹಬ್ಬದ ನಂತರ ರ್ಯಾಲಿ ನಡೆಸುವಂತೆ ವ್ಯಾಪಾರಿಗಳ ಸಂಘವು ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಈ ಹಿಂದೆಯೇ ಪತ್ರ ಬರೆದಿತ್ತು. ಹಬ್ಬದ ಶಾಪಿಂಗ್ ಅವಧಿಯಲ್ಲಿ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂಬ ಕಾರಣ ನೀಡಿ ರ್ಯಾಲಿಯನ್ನು ಮುಂದೂಡುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಮಂಗಳವಾರ ಚಿತ್ರದುರ್ಗಕ್ಕೆ ಸಿಎಂ ಡಿಕೆಶಿ ಭೇಟಿ – ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಬಿಜೆಪಿಯೇ ಕಾರಣ ಎಂದಿದ್ದ ರಾಹುಲ್
ಇನ್ನೊಂದೆಡೆ, ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ರ್ಯಾಲಿಗೆ ಬಂದವರು ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವಂತೆ ಮನವಿ ಮಾಡಿದ್ದೆವು. ಆದರೆ, ಕನ್ನಾಟ್ ಪ್ಲೇಸ್ಗೆ ಬಂದಾಗ ಬಿಜೆಪಿ ಪ್ರತಿಯೊಂದು ಅಂಗಡಿಯನ್ನೂ ಬಲವಂತವಾಗಿ ಮುಚ್ಚಿಸಿದೆ ಎಂದು ರಾಹುಲ್ ಗಾಂಧಿ ವಿಡಿಯೋವೊಂದರಲ್ಲಿ ಆರೋಪಿಸಿದ್ದಾರೆ.
