ಗದಗ: ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಹಣ ಹಾಗೂ ಭೂಮಿ ದುರುಪಯೋಗವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ಗಂಭೀರ ಆರೋಪ ಮಾಡಿದ್ದಾರೆ.
ವಿಶೇಷವಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 200 ಎಕರೆ ಭೂಮಿ ಕಾಣೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತು ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಪಿಂಚಣಿದಾರರ ಸಮಸ್ಯೆ ಇದೆ. ಹಣ ದುರುಪಯೋಗವಾಗಿರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರವಲ್ಲದೆ, ಮೈಸೂರು ಮತ್ತು ಹಂಪಿ ವಿಶ್ವವಿದ್ಯಾಲಯಗಳಲ್ಲಿಯೂ ಹಣ ದುರುಪಯೋಗವಾಗಿರುವ ಬಗ್ಗೆ ಮಾಹಿತಿ ಇದೆ ಎಂದರು.
ಕರ್ನಾಟಕ ವಿವಿಯ 200 ಎಕರೆ ಭೂಮಿ ಎಲ್ಲಿ? ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಟ್ಟು 888 ಎಕರೆ ಭೂಮಿ ಇರಬೇಕು. ಆದರೆ ಸುಮಾರು 200 ಎಕರೆ ಜಾಗದ ಲೆಕ್ಕ ಸಿಗುತ್ತಿಲ್ಲ ಎಂದು ಸಚಿವರು ಹೇಳಿದ್ದಾರೆ.
ಈ ಸಂಬಂಧ ಭೂಮಿಯ ಮ್ಯಾಪ್, ದಾಖಲೆ ಹಾಗೂ ಪಟ್ಟಿಗಳನ್ನು ಪರಿಶೀಲಿಸಲಾಗುತ್ತಿದೆ. ಎಲ್ಲ ದಾಖಲೆಗಳಿಗೆ ಸೀಲ್ ಹಾಕಿಸಿ, ಸಂಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ನೀಡುವುದಾಗಿ ತಿಳಿಸಿದರು.ಇದನ್ನೂ ಓದಿ: ತಮಿಳುನಾಡಿಗೆ ಪ್ರತ್ಯೇಕ ಧ್ವಜ ಘೋಷಣೆ – ಟಿವಿಕೆ ಸಚಿವರ ಹೇಳಿಕೆಗೆ ಬಿಜೆಪಿ ವಿರೋಧ
ರಾಜ್ಯದ ಪ್ರತಿಯೊಂದು ವಿಶ್ವವಿದ್ಯಾಲಯದ ಭೂಮಿಯ ಮ್ಯಾಪಿಂಗ್ ಮಾಡಿಸಲಾಗಿದೆ. ಭೂಮಿಯ ಸರ್ವೆ ನಡೆಸುವಂತೆ ಆದೇಶವನ್ನೂ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಎಲ್ಲ ವಿವರಣೆಗಳೊಂದಿಗೆ ಮಾಹಿತಿ ನೀಡುವುದಾಗಿ ಹೇಳಿದರು.
ನಾಲ್ವರು ಅಧಿಕಾರಿಗಳ ತಂಡದಿಂದ ತನಿಖೆ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೂಮಿ ದುರುಪಯೋಗವಾಗಿರುವ ಆರೋಪದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಧಾರವಾಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ತಂಡ ತನಿಖೆ ನಡೆಸಲಿದೆ. ಹಣ ದುರುಪಯೋಗದ ಬಗ್ಗೆಯೂ ತನಿಖೆ ಮಾಡಿಸಲಾಗುವುದು ಎಂದು ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಹಣದ ಕೊರತೆ ಇಲ್ಲ. ಪ್ರಾಥಮಿಕ ಹಂತದ ಮಾಹಿತಿಯ ಪ್ರಕಾರ ಯಾವುದೇ ವಿಶ್ವವಿದ್ಯಾಲಯದಲ್ಲಿ ಹಣದ ಕೊರತೆ ಕಂಡುಬಂದಿಲ್ಲ. ಸದ್ಯ ವಿಶ್ವವಿದ್ಯಾಲಯಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.ಇದನ್ನೂ ಓದಿ: ದೀಪಾವಳಿಗೆ ಬರ್ತೀನಿ ಅಂದಿದ್ದ ಮಗ ಬಾರದ ಲೋಕಕ್ಕೆ ಹೋದ: ಕಣ್ಣೀರಿಟ್ಟ ಅರುಣ ಸಾಳುಂಕೆ ತಂದೆ
