ಬೆಂಗಳೂರು: ವೆಜ್ ಬಿರಿಯಾನಿ ಆರ್ಡರ್ ಮಾಡಿದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್ ಬಿರಿಯಾನಿ (Chicken Biryani) ನೀಡಲಾಗಿದೆ ಎಂಬ ಗಂಭೀರ ಆರೋಪ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕೇಳಿಬಂದಿದೆ.
ಸಸ್ಯಾಹಾರಿ ಕುಟುಂಬದ ಮಕ್ಕಳು ಕೂಡ ಅರಿವಿಲ್ಲದೆ ಮಾಂಸಾಹಾರ ಸೇವಿಸಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಗೇಟ್ ಸಂಖ್ಯೆ 16-17ರ ಸಮೀಪವಿರುವ ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ನಮ್ಮಂಥ ಮಿಡಲ್ಕ್ಲಾಸ್ ಜನ ಜೀವನ ಮಾಡೋಕಾಗಲ್ಲ: ಹಾಲು, ಮೊಸರು ದರ ಏರಿಕೆಗೆ ಜನರ ಆಕ್ರೋಶ
ಬಿಲ್ನಲ್ಲಿ ವೆಜ್ ಬಿರಿಯಾನಿ, ಪ್ಲೇಟ್ನಲ್ಲಿ ಚಿಕನ್ ಬಿರಿಯಾನಿ:
ಪಿಯೂಷ್ ಅಗರ್ವಾಲ್ ಎಂಬುವವರ ಕುಟುಂಬ ರೆಸ್ಟೋರೆಂಟ್ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿತ್ತು ಎನ್ನಲಾಗಿದೆ. ರೆಸ್ಟೋರೆಂಟ್ ನೀಡಿದ ಬಿಲ್ನಲ್ಲಿಯೂ ವೆಜ್ ಬಿರಿಯಾನಿ ಎಂದೇ ನಮೂದಿಸಲಾಗಿತ್ತು. ಆದರೆ ಕುಟುಂಬಕ್ಕೆ ನೀಡಿದ ಆಹಾರದಲ್ಲಿ ಚಿಕನ್ ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ. ಸಸ್ಯಾಹಾರಿ ಕುಟುಂಬದ ಸದಸ್ಯರು ಹಾಗೂ ಮಕ್ಕಳು ಆಹಾರದಲ್ಲಿ ಮಾಂಸ ಇರುವುದನ್ನು ಅರಿಯದೆ ಸೇವಿಸಿದ್ದಾರೆ ಎಂದು ಪಿಯೂಷ್ ಅಗರ್ವಾಲ್ ಆರೋಪಿಸಿದ್ದಾರೆ.
ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಕುಟುಂಬ:
ಆಹಾರದಲ್ಲಿ ಚಿಕನ್ ಇರುವುದನ್ನು ಗಮನಿಸಿದ ಕುಟುಂಬಸ್ಥರು ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆಹಾರದಲ್ಲಿ ಚಿಕನ್ ಇರುವುದನ್ನು ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಶೆಫ್ ಒಪ್ಪಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದರೂ ಮಾಂಸಾಹಾರ ನೀಡಿರುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರುಣ ನಾಲೆಯಲ್ಲಿ ಈಜಲು ತೆರಳಿದ್ದ ಬಿ.ಇ ವಿದ್ಯಾರ್ಥಿ ಸಾವು – ಮತ್ತೋರ್ವನಿಗಾಗಿ ಶೋಧ
ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡ ಪಿಯೂಷ್ ಅಗರ್ವಾಲ್:
ಘಟನೆ ಕುರಿತು ಪಿಯೂಷ್ ಅಗರ್ವಾಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್ ನೀಡಿರುವ ಬಿಲ್ ಹಾಗೂ ಸಿಬ್ಬಂದಿಯೊಂದಿಗೆ ನಡೆದ ಸಂಭಾಷಣೆಯ ವಿಡಿಯೋವನ್ನು ಪ್ರಕಟಿಸಿ, ಆಹಾರ ಪೂರೈಕೆಯಲ್ಲಿ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆರ್ಡರ್ ದಾಖಲೆಗಳನ್ನು ಪರಿಶೀಲಿಸಿ ಸತ್ಯಾಂಶ ಹೊರತರಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಕಬ್ಬು ಬೆಳೆಗಾರರ ಪ್ರತಿಭಟನೆ; ಹಾವೇರಿಯಲ್ಲಿ ಹೆದ್ದಾರಿ, ಚಿಕ್ಕೋಡಿಯಲ್ಲಿ ಬಸ್ ಸಂಚಾರ ಬಂದ್
FSSAI ಹಾಗೂ ಏರ್ಪೋರ್ಟ್ ಆಡಳಿತಕ್ಕೆ ಕ್ರಮಕ್ಕೆ ಆಗ್ರಹ:
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪಿಯೂಷ್ ಅಗರ್ವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಹೋಟೆಲ್ ಸ್ವಿಮ್ಮಿಂಗ್ ಪೂಲ್ನಲ್ಲಿ ಇಬ್ಬರು ವಿದೇಶಿಗರು ವಿದ್ಯುತ್ ಶಾಕ್ಗೆ ಬಲಿ – ಮತ್ತಿಬ್ಬರಿಗೆ ಗಾಯ
ಘಟನೆ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಆಡಳಿತದ ಗಮನ ಸೆಳೆದಿರುವ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ ಕುಟುಂಬದ ಆರೋಪಗಳಿಗೆ ಸಂಬಂಧಿಸಿದಂತೆ ರೆಸ್ಟೋರೆಂಟ್ ಆಡಳಿತದಿಂದ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಲಭ್ಯವಾಗಬೇಕಿದೆ. ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ. ಇದನ್ನೂ ಓದಿ: ಇವತ್ತು ಮದುವೆಗೆ ಬರ್ತೀನಿ ಎಂದಿದ್ರು – ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸುಧೀರ್ ನೆನೆದ ಸಂಬಂಧಿಕರು
