ಮಂಡ್ಯ: ವರುಣ ನಾಲೆಯಲ್ಲಿ ಈಜಲು ತೆರಳಿದ್ದ ಮೈಸೂರಿನ ಖಾಸಗಿ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು (Engineering Students) ನಾಪತ್ತೆಯಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ. ಮತ್ತೋರ್ವ ವಿದ್ಯಾರ್ಥಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆ.ಆರ್.ಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗೊಳ ಪಂಪ್ಲೈನ್ ರಸ್ತೆಯ ವರುಣ ನಾಲೆಯಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಇ (ಎಂಜಿನಿಯರಿಂಗ್) ಅಭ್ಯಾಸ ಮಾಡುತ್ತಿದ್ದ ಪಾರ್ಥಸಾರಥಿ ಮತ್ತು ಅರ್ಜುನ್ ನಾಪತ್ತೆಯಾದ ದುರ್ದೈವಿಗಳು. ಇದನ್ನೂ ಓದಿ: ರಾಜ್ಯದ ಹಲವೆಡೆ ಕಬ್ಬು ಬೆಳೆಗಾರರ ಪ್ರತಿಭಟನೆ; ಹಾವೇರಿಯಲ್ಲಿ ಹೆದ್ದಾರಿ, ಚಿಕ್ಕೋಡಿಯಲ್ಲಿ ಬಸ್ ಸಂಚಾರ ಬಂದ್
ಶುಕ್ರವಾರ ಸ್ನೇಹಿತರೊಂದಿಗೆ ವರುಣ ನಾಲೆಗೆ ಈಜಲು ತೆರಳಿದ್ದ ಪಾರ್ಥಸಾರಥಿ ಮತ್ತು ಅರ್ಜುನ್, ಆ ಸಂದರ್ಭದಲ್ಲಿ ನಾಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಲೆಕ್ಕಿಸದೆ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಸಿಲುಕಿ ಇಬ್ಬರೂ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಹೋಟೆಲ್ ಸ್ವಿಮ್ಮಿಂಗ್ ಪೂಲ್ನಲ್ಲಿ ಇಬ್ಬರು ವಿದೇಶಿಗರು ವಿದ್ಯುತ್ ಶಾಕ್ಗೆ ಬಲಿ – ಮತ್ತಿಬ್ಬರಿಗೆ ಗಾಯ
ಕೂಡಲೇ ಎಚ್ಚೆತ್ತ ಉಳಿದ ಸ್ನೇಹಿತರು ಸ್ಥಳೀಯರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ತುರ್ತು ರಕ್ಷಣಾ ತಂಡವು ಶೋಧ ಕಾರ್ಯ ನಡೆಸಿ, ಇಂದು ಅರ್ಜುನ್ ಮೃತದೇಹವನ್ನು ನಾಲೆಯಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: ಇವತ್ತು ಮದುವೆಗೆ ಬರ್ತೀನಿ ಎಂದಿದ್ರು – ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸುಧೀರ್ ನೆನೆದ ಸಂಬಂಧಿಕರು
ಆದರೆ, ನಾಪತ್ತೆಯಾಗಿರುವ ಮತ್ತೊಬ್ಬ ವಿದ್ಯಾರ್ಥಿ ಪಾರ್ಥಸಾರಥಿಯ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಈ ಕುರಿತು ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ 27 ಭಾರತೀಯರಿದ್ದ ಟ್ಯಾಂಕರ್ ಮೇಲೆ ಲಿಂಪೆಟ್ ಮೈನ್ನಿಂದ ದಾಳಿ
