ದಾವಣಗೆರೆ: ಉತ್ತರಾಖಂಡದಲ್ಲಿ (Uttarakhand) ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ (Helicopter Crash) ಸಾವನ್ನಪ್ಪಿದ ಹೈಕೋರ್ಟ್ ನ್ಯಾಯವಾದಿ ಸುಧೀರ್.ಕೆ ಅವರನ್ನು ಸಂಬಂಧಿಕರು ನೆನೆಸಿಕೊಂಡು ಕಂಬನಿ ಮಿಡಿದಿದ್ದಾರೆ.
ಇಂದು (ಅ.31) ಸುಧೀರ್ ಅವರ ಚಿಕ್ಕಪ್ಪನ ಮಗನ ಮದುವೆ ಇತ್ತು. ಮದುವೆಗೆ ಬರುತ್ತೇನೆ ಎಂದಿದ್ದರು. ಆದರೆ ಅಷ್ಟರಲ್ಲೇ ಈ ದುರಂತ ನಡೆದಿದೆ ಎಂದು ಸಂಬಂಧಿಕರು ಭಾವುಕರಾಗಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ | ಬೆಂಗಳೂರಿನ ಐವರು ಸೇರಿ 6 ಮಂದಿ ಸಾವು – ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ಸುಧೀರ್ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಕೇವಲ ಹಬ್ಬ, ವಿಶೇಷ ಕಾರ್ಯಕ್ರಮಗಳಿಗೆ ಮಾತ್ರ ತ್ಯಾವಣಿಗೆಗೆ ಆಗಮಿಸುತ್ತಿದ್ದರು. ಮಹಾಲಯ ಅಮಾವಾಸ್ಯೆ ದಿನದಂದು ಗ್ರಾಮಕ್ಕೆ ಅವರು ಭೇಟಿ ನೀಡಿದ್ದರು. ಅವರ ದುರ್ಮರಣದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಗ್ರಾಮಕ್ಕೆ ಬಂದಾಗ ಎಲ್ಲರ ಜೊತೆ ಅತ್ಮೀಯವಾಗಿದ್ದರು. ಯಾರಿಗೆ ಏನೇ ಕಷ್ಟ ಬಂದರೂ ಮುಂದೆ ನಿಲ್ಲುತ್ತಿದ್ದರು. ಇಂದು ಮದುವೆಗೆ ಬರ್ತೀನಿ ಸಿಗೋಣ, ಖುಷಿಯಾಗಿ ಮಾತಾಡೋಣ ಎಂದು ಕುಟುಂಬಸ್ಥರಿಗೆ ಹೇಳಿದ್ದರು. ಈಗ ಈ ದುರಂತ ನಡೆದು ಹೋಗಿದೆ. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಜೋಶಿಮಠ ಬಳಿ ಹೆಲಿಕಾಪ್ಟರ್ ಪತನ – ಅವಘಡದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದುರ್ಮರಣ
