– ರಕ್ಷಣಾ ಕಾರ್ಯಾಚರಣೆಗೆ ಹಿಮ ಮಳೆ ಅಡ್ಡಿ
ಡೆಹ್ರಾಡೂನ್: ಉತ್ತರಾಖಂಡದ ಬದರಿನಾಥ ಮಾರ್ಗದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ದುರಂತದಲ್ಲಿ ಪೈಲಟ್ ಸೇರಿದಂತೆ ಐವರು ಕನ್ನಡಿಗರು ಮೃತಪಟ್ಟಿದ್ದು, (Uttarakhand Helicopter Crash) ಹೆಲಿಕಾಪ್ಟರ್ ಪತನಗೊಳ್ಳುವ ಭೀಕರ ದೃಶ್ಯ ಇದೀಗ ಲಭ್ಯವಾಗಿವೆ.
ಇನ್ನು ಪತನಗೊಂಡ ಚಾಪರ್ನಲ್ಲಿ ಪ್ರಯಾಣಿಸುತ್ತಿದ್ದ ಹಾಸನದ ಸಕಲೇಶಪುರ ಮೂಲದ ಪ್ರತಾಪ್ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದರು. ಪ್ರತಾಪ್ ಅವರ ಕೊನೆ ಕ್ಷಣದ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಇತ್ತ ಹಿಮಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ಮಧ್ಯಾಹ್ನ 1:14ಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್ಗೆ ಸೇರಿದ ಹೆಲಿಕಾಪ್ಟರ್ ಬದರಿನಾಥದಿಂದ ಸಹಸ್ರಧಾರಾ ಹೆಲಿಪೋರ್ಟ್ಗೆ ಪ್ರಯಾಣ ಆರಂಭಿಸಿತ್ತು. ಜೋಶಿಮಠದ ಕಣಿವೆ ಬಳಿ ಹಾರಾಟ ನಡೆಸುತ್ತಿದ್ದ ವೇಳೆ ಪ್ರತಿಕೂಲ ಹವಾಮಾನ ಎದುರಾಗಿದೆ. ಮಳೆ, ಮಂಜು ಮತ್ತು ಹಿಮಪಾತದಿಂದ ಗೋಚರತೆ ಕಡಿಮೆಯಾಗಿ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡಿದೆ. ಬಳಿಕ ಹೆಲಿಕಾಪ್ಟರ್ ಪತನಗೊಂಡಿರುವುದು ತಿಳಿದುಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಚಮೋಲಿ ಜಿಲ್ಲಾಡಳಿತ, ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮತ್ತು ಸೇನಾ ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿವೆ. ಆದರೆ ನಿರಂತರ ಹಿಮಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ಗೆ ಸೇರಿದ ಎಲ್ಲ ಹೆಲಿಕಾಪ್ಟರ್ಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಇದನ್ನೂ ಓದಿ: ಜೋಶಿಮಠ ಬಳಿ ಹೆಲಿಕಾಪ್ಟರ್ ಪತನ – ಅವಘಡದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದುರ್ಮರಣ
ಇನ್ನು ಚಾರ್ಧಾಮ್ ಯಾತ್ರಾ ಮಾರ್ಗದಲ್ಲಿ ಹೆಲಿಕಾಪ್ಟರ್ಗಳ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದೆ. ಇದೇ ಅಕ್ಟೋಬರ್ ತಿಂಗಳ ಆರಂಭದಲ್ಲಿ ಹವಾಮಾನ ವೈಪರೀತ್ಯದಿಂದ ರುದ್ರಪ್ರಯಾಗದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು. ಮತ್ತೊಂದೆಡೆ ತಾಂತ್ರಿಕ ದೋಷದಿಂದ ಟೆಹ್ರಿ ಬಳಿ ಮತ್ತೊಂದು ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ನಡೆಸಿತ್ತು. ಇದೀಗ ಬದರಿನಾಥ ಮಾರ್ಗದಲ್ಲಿ ಮತ್ತೊಂದು ಹೆಲಿಕಾಪ್ಟರ್ ದುರಂತ ಸಂಭವಿಸಿರುವುದು ಯಾತ್ರಾರ್ಥಿಗಳು ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ | ಬೆಂಗಳೂರಿನ ಐವರು ಸೇರಿ 6 ಮಂದಿ ಸಾವು – ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
