– ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಸೇರಿ 6 ಮಂದಿ ದುರ್ಮರಣ
ಡೆಹ್ರಾಡೂನ್: ಉತ್ತರಾಖಂಡ್ನ ಚಮೋಲಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಕ್ಯಾಪ್ಟನ್ ಸೇರಿ ಕರ್ನಾಟಕದ 5 ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡಗಳು ಸುಟ್ಟು ಕರಕಲಾಗಿದ್ದ ಮೃತದೇಹಗಳನ್ನ ಪತ್ತೆಹಚ್ಚಿವೆ. ಮೃತರನ್ನು ಕ್ಯಾ. ಹಿಮಾಂಶು ಸಬರ್ವಾಲ್, ಬೆಂಗಳೂರು ಮೂಲದವರಾದ ವಿ.ಬಿ ಶಂಕರ್ಗೌಡ, ಪ್ರತಾಪ್ ಬಚಿಹಳ್ಳಿ ನಿಂಗಾರಾಜನ್, ಅರುಣ್ ಸಾಳುಂಕೆ, ಸುಧೀರ್ ಹಾಗೂ ಹೆಚ್.ಎಸ್ ನಟರಾಜ್ ಅಂತ ಗುರುತಿಸಲಾಗಿದೆ.
ರಕ್ಷಣಾ ತಂಡಗಳ ಸವಾಲಿನ ಕಾರ್ಯಾಚರಣೆ ಮಧ್ಯೆ ಸುಟ್ಟ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.
ಅಪಘಾತ ಸಂಭವಿಸುವ ವೇಳೆ ಬದ್ರಿನಾಥದಿಂದ ಡೆಹ್ರಾಡೂನ್ನ ಸಹಸ್ತ್ರಧಾರಾಗೆ ಹೆಲಿಕಾಪ್ಟರ್ ತೆರಳುತ್ತಿತ್ತು. ಮಧ್ಯಾಹ್ನ 1.14ಕ್ಕೆ ಟೇಕಾಫ್ ಆಗಿದ್ದ ಹೆಲಿಕಾಪ್ಟರ್ ಕೆಲವು ನಿಮಿಷಗಳ ಬಳಿಕ ಜೋಶಿಮಠ ಕಣಿವೆ ಮೇಲೆ ಹಾರಾಡುತ್ತಿದ್ದಾಗ ಸಂಪರ್ಕ ಕಡಿತವಾಗಿದೆ. ದುರ್ಘಟನೆ ಬಗ್ಗೆ ಉತ್ತರಾಖಂಡ್ ಸಿಎಂ ಪುಷ್ಕರ್ ಧಾಮಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಂತಾಪ ಸೂಚಿಸಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

