ಡೆಹ್ರಾಡೂನ್: ಉತ್ತರಾಖಂಡದಲ್ಲಿರುವ (Uttarakhand) ಬದರಿನಾಥ ಧಾಮದಿಂದ ಫಾಟ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ (JoshiMath) ಸಮೀಪ ಪತನಗೊಂಡಿದ್ದು, ಕರ್ನಾಟಕದ ಐವರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ದುರಂತ ಅಂತ್ಯಕಂಡಿದ್ದಾರೆ.
ಅವಘಡದಲ್ಲಿ ತುಮಕೂರಿನ (Tumakuru) ಹುಲಿಯೂರುದುರ್ಗದ ಹೆಚ್ಎನ್ ನಟರಾಜು ಸಾವನ್ನಪ್ಪಿದ್ದು, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಐವರು ಸ್ನೇಹಿತರೊಂದಿಗೆ ನಾಲ್ಕು ದಿನದ ಹಿಂದೆ ಪ್ರವಾಸಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೋಶಿಮಠ ಬಳಿ ಹೆಲಿಕಾಪ್ಟರ್ ಪತನ – ದುರಂತದಲ್ಲಿ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಸಾವು
ಇನ್ನೂ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು, ಜೋಶಿಮಠ ಸಮೀಪದ ಚಾಯೀ ಗ್ರಾಮದ ಬಳಿ ಸಂಭವಿಸಿರುವ ಹೆಲಿಕಾಪ್ಟರ್ ಅಪಘಾತ ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಮಾಹಿತಿ ಬಂದಿದೆ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಎಸ್ಡಿಆರ್ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ನಾನು ಇಡೀ ಘಟನೆಯನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಗಂಭೀರವಾಗಿ ಗಾಯಗೊಂಡವರನ್ನ ಉತ್ತಮ ಚಿಕಿತ್ಸೆಗಾಗಿ ತಕ್ಷಣವೇ ಏರ್ ಲಿಫ್ಟ್ ಮಾಡಲು ಸೂಚನೆ ನೀಡಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
