* ನ.1ರ ರ್ಯಾಲಿ ಮುಂದೂಡುವಂತೆ ಸೋನಿಯಾ ಗಾಂಧಿಗೆ ದೆಹಲಿ ವ್ಯಾಪಾರಿಗಳ ಪತ್ರ
* 10 ಸಾವಿರದಿಂದ 12 ಸಾವಿರ ಕೋಟಿ ವಹಿವಾಟು ನಷ್ಟದ ಭೀತಿ
ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆಯಲಿರುವ ಇಂಡಿಯಾ ಒಕ್ಕೂಟದ (INDIA Bloc) ಬೃಹತ್ ರ್ಯಾಲಿಯನ್ನು ಮುಂದೂಡುವಂತೆ ದೆಹಲಿಯ ವ್ಯಾಪಾರಿಗಳ ಸಂಘಟನೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದೆ. ದೀಪಾವಳಿ (Diwali) ಹಬ್ಬದ ವ್ಯಾಪಾರದ ನಿರ್ಣಾಯಕ ಸಂದರ್ಭದಲ್ಲಿ ರ್ಯಾಲಿ ನಡೆಯುವುದರಿಂದ ದೆಹಲಿಯ ಸುಮಾರು 20 ಪ್ರಮುಖ ಮಾರುಕಟ್ಟೆಗಳಲ್ಲಿ 10 ಸಾವಿರದಿಂದ 12 ಸಾವಿರ ಕೋಟಿ ವಹಿವಾಟಿಗೆ ಅಡ್ಡಿಯಾಗುವ ಆತಂಕವಿದೆ ಎಂದು ಚೇಂಬರ್ ಆಫ್ ಟ್ರೇಡ್ & ಇಂಡಸ್ಟ್ರಿ ತಿಳಿಸಿದೆ.
CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದು, ನವೆಂಬರ್ 1ರ ರ್ಯಾಲಿಯನ್ನು ದೀಪಾವಳಿ ನಂತರ ನವೆಂಬರ್ 10 ಅಥವಾ 11ರ ಬಳಿಕ ಆಯೋಜಿಸುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ನಿಗದಿತ ದಿನಾಂಕದಂದೇ ರ್ಯಾಲಿ ನಡೆಸುವುದು ಅನಿವಾರ್ಯವಾದರೆ, ಹೆಚ್ಚಿನ ವಾಹನಗಳ ನಿಲುಗಡೆಗೆ ಅವಕಾಶವಿರುವ ಬುರಾರಿ ಮೈದಾನಕ್ಕೆ ಸ್ಥಳಾಂತರಿಸುವಂತೆಯೂ ಪರ್ಯಾಯ ಸಲಹೆ ನೀಡಿದ್ದಾರೆ.
10 ಲಕ್ಷ ಜನರ ನಿರೀಕ್ಷೆ, 15ರಿಂದ 20 ಸಾವಿರ ವಾಹನಗಳು
ರ್ಯಾಲಿಯಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, 15 ಸಾವಿರದಿಂದ 20 ಸಾವಿರ ವಾಹನಗಳು ದೆಹಲಿಗೆ ಆಗಮಿಸುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳ ಸಂಘಟನೆ ಆತಂಕ ವ್ಯಕ್ತಪಡಿಸಿದೆ. ರಾಮಲೀಲಾ ಮೈದಾನದಲ್ಲಿ 200 ದೊಡ್ಡ ಬಸ್ಗಳನ್ನು ನಿಲುಗಡೆ ಮಾಡಲು ಕೂಡ ಸಾಕಷ್ಟು ಸ್ಥಳಾವಕಾಶವಿಲ್ಲ. ಹೀಗಾಗಿ, ವಾಹನಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದರಿಂದ ಸಂಚಾರ ದಟ್ಟಣೆ ಉಂಟಾಗಿ ವ್ಯಾಪಾರ ವಹಿವಾಟಿಗೆ ಹೊಡೆತ ಬೀಳಬಹುದು ಎಂದು ಹೇಳಿದೆ. ಇದನ್ನೂ ಓದಿ: ಐಡಿಬಿಐ ಮಾರಾಟ| ಜನಾರ್ದನ ಪೂಜಾರಿ ಸಾಲ ಮೇಳವನ್ನು ಉಲ್ಲೇಖಿಸಿ ರಾಹುಲ್ಗೆ ಸೀತಾರಾಮನ್ ತಿರುಗೇಟು
20 ಪ್ರಮುಖ ಮಾರುಕಟ್ಟೆಗಳ ಮೇಲೆ ಪರಿಣಾಮದ ಆತಂಕ
ರಾಮಲೀಲಾ ಮೈದಾನದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಾಂದಿನಿ ಚೌಕ್, ಸದರ್ ಬಜಾರ್, ಖಾರಿ ಬಾವಲಿ, ಕನ್ನಾಟ್ ಪ್ಲೇಸ್, ಪಾಲಿಕಾ ಬಜಾರ್, ಭಗೀರಥ್ ಪ್ಯಾಲೇಸ್, ಕಾಶ್ಮೀರಿ ಗೇಟ್, ಕರೋಲ್ ಬಾಗ್, ಚಾವಡಿ ಬಜಾರ್, ದರಿಬಾ ಕಲಾನ್ ಸೇರಿದಂತೆ ಸುಮಾರು 20 ಪ್ರಮುಖ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಿವೆ.
ಈ ಮಾರುಕಟ್ಟೆಗಳಲ್ಲಿ ಪ್ರತಿದಿನ ₹10 ಸಾವಿರದಿಂದ ₹12 ಸಾವಿರ ಕೋಟಿ ವಹಿವಾಟು ನಡೆಯುತ್ತದೆ ಎಂದು CTI ಅಂದಾಜಿಸಿದೆ. ದೆಹಲಿಯ 56 ಕೈಗಾರಿಕಾ ಪ್ರದೇಶಗಳಿಂದ ಪ್ರತಿದಿನ ಸುಮಾರು 5 ಸಾವಿರ ಟ್ರಕ್ಗಳು ಮತ್ತು ಟೆಂಪೋಗಳ ಮೂಲಕ ಸರಕುಗಳು ಮಾರುಕಟ್ಟೆಗಳಿಗೆ ಬರುತ್ತವೆ. ಅಲ್ಲಿಂದ ಸುಮಾರು 3 ಸಾವಿರ ವಾಹನಗಳ ಮೂಲಕ ದೆಹಲಿ-ಎನ್ಸಿಆರ್ ಪ್ರದೇಶದ ನಗರಗಳು ಹಾಗೂ ಇತರ ರಾಜ್ಯಗಳಿಗೆ ಸರಕುಗಳನ್ನು ಸಾಗಿಸಲಾಗುತ್ತದೆ. ರ್ಯಾಲಿಯಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾದರೆ ಸರಕುಗಳ ಸಾಗಣೆ ಮತ್ತು ಗ್ರಾಹಕರ ಓಡಾಟಕ್ಕೂ ತೊಂದರೆಯಾಗಲಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅ.31 ರಿಂದಲೇ ಸಂಚಾರ ವ್ಯತ್ಯಯದ ಸಾಧ್ಯತೆ
ರ್ಯಾಲಿಯಲ್ಲಿ ಪಾಲ್ಗೊಳ್ಳುವವರ ವಾಹನಗಳು ಅಕ್ಟೋಬರ್ 31ರ ಮಧ್ಯಾಹ್ನದಿಂದಲೇ ಸಿಂಘು, ಟಿಕ್ರಿ, ಘಾಜಿಪುರ ಮತ್ತು ಬದರ್ಪುರ ಗಡಿಗಳ ಮೂಲಕ ದೆಹಲಿಗೆ ಪ್ರವೇಶಿಸುವ ಸಾಧ್ಯತೆಯಿದೆ. ಬಳಿಕ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸುವುದರಿಂದ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಈಗಾಗಲೇ ಕೆಲವು ಸರಕು ಸಾಗಣೆದಾರರು ಅಕ್ಟೋಬರ್ 31ರಿಂದ ಮಾರುಕಟ್ಟೆಗಳಿಗೆ ವಾಹನ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು CTI ಹೇಳಿದೆ. ಇದನ್ನೂ ಓದಿ: ಪೊಲೀಸರ ಲಾಠಿಗೆ ಹೆದರಬೇಡಿ, ನ.1ರ ವೋಟ್ ಚೋರಿ ರ್ಯಾಲಿಯಲ್ಲಿ ಭಾಗಿಯಾಗಿ; ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿ ಕರೆ
ನವೆಂಬರ್ 6ರಂದು ಧನ್ತೇರಸ್ ಹಾಗೂ ನವೆಂಬರ್ 8ರಂದು ದೀಪಾವಳಿ ಇರುವುದರಿಂದ ಈ ಸಮಯದಲ್ಲಿ ವ್ಯಾಪಾರ ವಹಿವಾಟು ಅತ್ಯಂತ ಮಹತ್ವದ್ದಾಗಿದೆ. ಹಬ್ಬದ ಖರೀದಿ ಮತ್ತು ಸರಕುಗಳ ಪೂರೈಕೆಗೆ ಅಡ್ಡಿಯಾಗದಂತೆ ರ್ಯಾಲಿಯ ದಿನಾಂಕ ಬದಲಿಸುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ರ್ಯಾಲಿ ವಿರೋಧವಲ್ಲ, ಜೀವನೋಪಾಯದ ರಕ್ಷಣೆ ನಮ್ಮ ಉದ್ದೇಶ
ರಾಜಕೀಯ ರ್ಯಾಲಿಯನ್ನು ವಿರೋಧಿಸುವುದು ತಮ್ಮ ಉದ್ದೇಶವಲ್ಲ. ಹಬ್ಬದ ಸಂದರ್ಭದಲ್ಲಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಮನವಿ ಮಾಡುತ್ತಿದ್ದೇವೆ ಎಂದು CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ. ಈ ಹಿಂದೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೂ ರ್ಯಾಲಿ ಮುಂದೂಡುವಂತೆ ಮನವಿ ಮಾಡಲಾಗಿತ್ತು. ಇದೀಗ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶವನ್ನು ಕೋರಲಾಗಿದೆ.
ಚುನಾವಣಾ ಅಕ್ರಮಗಳು ಮತ್ತು ಮತಗಳ್ಳತನದ ಆರೋಪಗಳನ್ನು ಮುಂದಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ INDIA ಒಕ್ಕೂಟ ಈ ರ್ಯಾಲಿ ಆಯೋಜಿಸಿದೆ.
