– ನಾಳೆಯಿಂದ ಭಕ್ತರಿಗೆ ದೇವಿ ದರ್ಶನ
ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ (Hasanamba Jatra Mahotsava) ಗುರುವಾರ (ಅ.29) ಶುಭ ಚಾಲನೆ ದೊರೆಯಿತು. ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12:28ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆಯಲಾಯಿತು. ಈ ವೇಳೆ ಹಾಜರಿದ್ದ ನೂರಾರು ಭಕ್ತರು, ಹಾಸನಾಂಬೆಗೆ ಜಯವಾಗಲಿ ಎಂದು ವಿಶೇಷ ಘೋಷವಾಕ್ಯ ಮೊಳಗಿಸಿದರು.
ಹಾಸನಾಂಬ ಗರ್ಭಗುಡಿ ಬಾಗಿಲು ತೆರೆದ ವೇಳೆ ನಂದಾದೀಪ ಉರಿಯುತ್ತಿತ್ತು. ಹೂವುಗಳು ಬಾಡಿರಲಿಲ್ಲ. ಅಲ್ಲದೇ ನೈವೇದ್ಯ ಹಳಸದೇ ಹಾಗೆ ಇತ್ತು. ಈ ಪವಾಡಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬಳಿಕ ದೇವಾಲಯದಲ್ಲಿ 20 ಅರ್ಚಕರ ತಂಡದಿಂದ ವಿಶೇಷ ಪೂಜೆ ನೆರವೇರಿತು.
ಗರ್ಭಗುಡಿ ಬಾಗಿಲು ತೆರೆಯುವ ವೇಳೆ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಲಿಂಗಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಮುಜರಾಯಿ ಖಾತೆ ಸಚಿವ ಬಸಂತಪ್ಪ, ಜಿಲ್ಲಾಧಿಕಾರಿ ಲತಾಕುಮಾರಿ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರು ಇದ್ದರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ಹಲವು ಪವಾಡ ಸದೃಶ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಪ್ರತಿ ವರ್ಷ ಗರ್ಭಗುಡಿ ಬಾಗಿಲು ಹಾಕುವಾಗ ಹಚ್ಚಿದ ಹಣತೆ, ಇಟ್ಟ ನೈವೇದ್ಯ, ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಜೊತೆಗೆ ಬೇಡಿದ ಇಷ್ಟಾರ್ಥಗಳನ್ನು ಅಧಿದೇವತೆ ಈಡೇರಿಸುತ್ತಾಳೆ ಎಂಬ ನಂಬಿಕೆ ಇರುವುದರಿಂದ ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಜನ ದೇವಿ ದರ್ಶನಕ್ಕಾಗಿ ಆಗಮಿಸುತ್ತಾರೆ. ಬರುವ ಭಕ್ತರಿಗೆ ಮಳೆ-ಬಿಸಿಲಿಂದ ರಕ್ಷಣೆ ನೀಡಲು ದೇಗುಲದ ಹೊರಗಡೆ ಟೆಂಟ್ ವ್ಯವಸ್ಥೆ ಸಹ ಮಾಡಲಾಗಿದೆ.

