ಬೆಳಗಾವಿ: ಕಬ್ಬು ಬೆಳೆಗಾರರ (Farmer Protest) ಸಮಸ್ಯೆಗಳನ್ನು ಆಲಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ಮುಂದೆ ರೈತ ಮುಖಂಡ ಚೂನಪ್ಪ ಪೂಜಾರಿ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವುದರ ಜೊತೆಗೆ, ಪ್ರತಿ ಟನ್ಗೆ 1,000 ಪ್ರೋತ್ಸಾಹ ಧನ ನೀಡಬೇಕು. ಇದನ್ನು ಸರ್ಕಾರದ ಆರನೇ ಗ್ಯಾರಂಟಿಯಾಗಿ ಘೋಷಿಸಬೇಕು ಎಂದು ಅವರು ಮನವಿ ಮಾಡಿದರು.
ಎಂಎಸ್ಪಿ ಹೆಚ್ಚಳಕ್ಕಾಗಿ ಹುಬ್ಬಳ್ಳಿಯಲ್ಲಿ ಹೋರಾಟ ನಡೆಸಿದ್ದೇವೆ. ಬಳಿಕ ದೆಹಲಿಯಲ್ಲಿಯೂ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸಲಾಗಿತ್ತು. ಈ ಸಮಸ್ಯೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಇಡೀ ದೇಶದ ರೈತರ ಸಮಸ್ಯೆಯಾಗಿದೆ ಎಂದು ತಿಳಿಸಲಾಗಿತ್ತು. ಹೀಗಾಗಿ ನಿರ್ಧಾರ ಕೈಗೊಳ್ಳಲು ಸಮಯ ತೆಗೆದುಕೊಳ್ಳಲಾಯಿತು. ಇದೀಗ ರೈತರ ಸಂಕಷ್ಟವನ್ನು ಆಲಿಸಲು ಮುಖ್ಯಮಂತ್ರಿ ಬಂದಿರುವುದು ಸ್ವಾಗತಾರ್ಹ ಎಂದು ಹೇಳಿದರು.
ರಿಕವರಿ ಮತ್ತು ತೂಕದ ಮೋಸಕ್ಕೆ ಕಡಿವಾಣ ಹಾಕಿ
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ರಿಕವರಿ ಲೆಕ್ಕಾಚಾರ ಹಾಗೂ ತೂಕದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಚೂನಪ್ಪ ಪಜೇರಿ ಆರೋಪಿಸಿದರು. ರಿಕವರಿ ಪರಿಶೀಲನೆಗೆ ವೈಜ್ಞಾನಿಕ ಮಾದರಿ ಪರೀಕ್ಷಾ ಯಂತ್ರಗಳನ್ನು ಅಳವಡಿಸಬೇಕು. ಪ್ರತಿ ಕಾರ್ಖಾನೆಯ ಮುಂದೆ ತೂಕದ ಯಂತ್ರಗಳನ್ನು ಸ್ಥಾಪಿಸಿ, ರೈತರಿಗೆ ಮೋಸವಾಗದಂತೆ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಆಯುಕ್ತರ ಕಚೇರಿಯಲ್ಲಿ ಕೇವಲ ನಾಲ್ವರು ಅಧಿಕಾರಿಗಳಿದ್ದು, ರಾಜ್ಯದ ಎಲ್ಲ ಕಾರ್ಖಾನೆಗಳ ತೂಕ ಮತ್ತು ರಿಕವರಿ ಪರಿಶೀಲನೆ ನಡೆಸಲು ಸಾಕಷ್ಟು ಸಿಬ್ಬಂದಿ ಇಲ್ಲ. ಹೀಗಾಗಿ ಕಚೇರಿಯನ್ನು ಬಲಪಡಿಸಿ, ಅಗತ್ಯ ಸಿಬ್ಬಂದಿ ಹಾಗೂ ತಾಂತ್ರಿಕ ಸೌಲಭ್ಯ ಕಲ್ಪಿಸಬೇಕು. ಈ ಉದ್ದೇಶಕ್ಕಾಗಿ 500 ಕೋಟಿ ರೂ. ಮೀಸಲಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.ಟನ್ಗೆ 1,000 ಪ್ರೋತ್ಸಾಹ ಧನ ನೀಡಿ. ಒಂದು ಟನ್ ಕಬ್ಬು ಬೆಳೆಯಲು ಸುಮಾರು 5,000ರಿಂದ 6,000 ರೂ. ವೆಚ್ಚವಾಗುತ್ತಿದೆ. ಕೃಷಿ ವೆಚ್ಚ ಹೆಚ್ಚಳದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಚೂನಪ್ಪ ಪೂಜಾರಿ ಹೇಳಿದರು.
ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ 40,000ರಿಂದ 50,000 ಕೋಟಿ ಆದಾಯ ಬರುತ್ತದೆ ಎಂದು ಉಲ್ಲೇಖಿಸಿದ ಅವರು, ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಉದ್ದೇಶದಿಂದ ಪ್ರತಿ ಟನ್ ಕಬ್ಬಿಗೆ 1,000 ಪ್ರೋತ್ಸಾಹ ಧನ ನೀಡಬೇಕು. ಇದನ್ನು ಆರನೇ ಗ್ಯಾರಂಟಿಯಾಗಿ ಘೋಷಿಸಬೇಕು. ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ ಕಬ್ಬಿಗೆ 4,500 ದರ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬರಗಾಲದ ಪರಿಸ್ಥಿತಿಯಿಂದ ಕಬ್ಬು ಬೆಳೆ ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಬೇಡಿಕೆಗಳನ್ನು ಮುಂದೂಡದೆ ಇಂದೇ ಕಬ್ಬಿನ ದರ ನಿಗದಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಚೂನಪ್ಪ ಪೂಜಾರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.ಇದನ್ನೂ ಓದಿ: ಗ್ಯಾಸ್ ರೀಫಿಲ್ಲಿಂಗ್ ಸೆಂಟರ್ ಅಗ್ನಿ ಅವಘಡ – ಎರಡು ದಿನಗಳ ಬಳಿಕ ದಂಪತಿ ಡೆಡ್ ಬಾಡಿ ಪತ್ತೆ
ರೈತರ ಬೇಡಿಕೆಗಳು ಈಡೇರದಿದ್ದರೆ ನಾಳೆ ಕರ್ನಾಟಕ ಬಂದ್ ನಡೆಸುವ ಕುರಿತು ರೈತರು ಚಿಂತನೆ ನಡೆಸುತ್ತಿದ್ದಾರೆ ಎಂದು ಅವರು ಸಭೆಗೆ ತಿಳಿಸಿದರು.ರಾಜ್ಯದ ಕಬ್ಬು ಬೆಳೆಗಾರರ ಬದುಕು ಉಳಿಸಲು ಸರ್ಕಾರ ಗಂಭೀರವಾಗಿ ಸ್ಪಂದಿಸಬೇಕು. ತೂಕ ಮತ್ತು ರಿಕವರಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ, ನ್ಯಾಯಯುತ ಬೆಲೆ ಹಾಗೂ ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಚೂನಪ್ಪ ಪೂಜೇರಿ ಆಗ್ರಹಿಸಿದರು.ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಅಭಾವದ ಆತಂಕ, ಕಬ್ಬು ಬೆಳೆಗಾರರಿಗೆ ಹೆಚ್ಚಿನ ಹಣ ನೀಡುವುದು ಸವಾಲು: ಡಿಕೆಶಿ ಕಳವಳ
