ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮೇಲಿನ ಸ್ಟಿಂಗ್ ಕಾರ್ಯಾಚರಣೆ(Sting Operation) ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ತನಿಖೆಗೆ ತೆರಳಿದ್ದ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್(Police Inspector) ಅವರ ಚಿನ್ನದ ಬ್ರೇಸ್ಲೇಟ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿದ್ದರಾಮಯ್ಯ ಅವರ ಸ್ಟಿಂಗ್ ಕೇಸ್ಗೆ ಸಂಬಂಧಿಸಿದಂತೆ, ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿರುವ ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ(Mohan Gowda) ಅವರ ನಿವಾಸದ ಮೇಲೆ ನ್ಯಾಯಾಲಯದ ಸರ್ಚ್ ವಾರಂಟ್ನೊಂದಿಗೆ ಪೊಲೀಸರು ದಾಳಿ ನಡೆಸಿದ್ದರು. ಇನ್ಸ್ಪೆಕ್ಟರ್ಗಳಾದ ಮುಖರಾಮ್, ಕವಿತಾ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಪರಿಶೀಲನೆ ನಡೆಸಲು ಮುಂದಾಗಿತ್ತು.
ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮೋಹನ್ ಗೌಡ ಅವರ ಪತ್ನಿ ಪವಿತ್ರಾ ಹಾಗೂ ಅವರ ಗೆಳತಿ ಪವಿತ್ರಾ ಇಬ್ಬರೂ ತನಿಖೆಗೆ ಸಹಕರಿಸದೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಸಾಕ್ಷ್ಯ ಸಂಗ್ರಹದ ಭಾಗವಾಗಿ ಮೊಬೈಲ್ ಫೋನ್ ವಶಕ್ಕೆ ಪಡೆಯಲು ಪೊಲೀಸರು ಯತ್ನಿಸಿದಾಗ, ಮೊಬೈಲ್ ನೀಡಲು ನಿರಾಕರಿಸಿದ ಪವಿತ್ರಾ ಹಾಗೂ ಮಹಿಳಾ ಇನ್ಸ್ಪೆಕ್ಟರ್ ಕವಿತಾ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ಎಳೆದಾಟ ನಡೆದಿದೆ.
ಈ ಎಳೆದಾಟದ ವೇಳೆ ಇನ್ಸ್ಪೆಕ್ಟರ್ ಕವಿತಾ ಅವರ ಕೈಯಲ್ಲಿದ್ದ ಸುಮಾರು 9 ಗ್ರಾಂ ತೂಕದ ಚಿನ್ನದ ಬ್ರೇಸ್ಲೇಟ್ (ಚೈನ್) ಕಟ್ ಆಗಿ ಬಿದ್ದಿದೆ ಎನ್ನಲಾಗಿದೆ. ಶೋಧ ಕಾರ್ಯ ಮುಗಿಸಿ ಠಾಣೆಗೆ ಮರಳಿದ ಬಳಿಕವಷ್ಟೇ ಕವಿತಾ ಅವರಿಗೆ ತಮ್ಮ ಕೈಯಲ್ಲಿದ್ದ ಬಂಗಾರದ ಆಭರಣ ಕಳೆದುಹೋಗಿರುವುದು ಅರಿವಿಗೆ ಬಂದಿದೆ.
ಕೂಡಲೇ ಅವರು ವಾಪಸ್ ಮೋಹನ್ ಅವರ ಮನೆಗೆ ತೆರಳಿ ಬ್ರೇಸ್ಲೇಟ್ ಹುಡುಕಾಟ ನಡೆಸಿದ್ದಲ್ಲದೆ ಪವಿತ್ರಾ ಅವರನ್ನು ವಿಚಾರಿಸಿದ್ದಾರೆ. ಆದರೆ ಆಕೆಯು ನಮಗೆ ಯಾವುದೇ ಚಿನ್ನದ ಸರ ಅಥವಾ ಬ್ರೇಸ್ಲೇಟ್ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ತಪಾಸಣೆ ವೇಳೆ ಚಿನ್ನದ ಬ್ರೇಸ್ಲೇಟ್ ನಾಪತ್ತೆಯಾದ ಸಂಬಂಧ ಇನ್ಸ್ಪೆಕ್ಟರ್ ಕವಿತಾ ಅವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆಯೇ, ಬಂಧನದ ಭೀತಿಯಿಂದ ಆರೋಪಿ ಪವಿತ್ರಾ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪರಾರಿಯಾಗಿರುವ ಮಹಿಳೆಯ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
