ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಇತ್ತೀಚೆಗೆ ತಮ್ಮ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಘಟನೆಯಿಂದ ಸುದ್ದಿಯಲ್ಲಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಮುಂಬೈನ ಖಾರ್ ವೆಸ್ಟ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಅನ್ನು 9 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. CRE Matrix ಪಡೆದುಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಂಬೈನ ಖಾರ್ ವೆಸ್ಟ್ನಲ್ಲಿರುವ (Khar West Apartment) ರುಸ್ತಮ್ಜಿ ಪ್ಯಾರಾಮೌಂಟ್ ಡಿ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ 9ನೇ ಮಹಡಿಯಲ್ಲಿರುವ ಈ ಫ್ಲಾಟ್ 1,291.14 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರೊಂದಿಗೆ 95.80 ಚದರ ಅಡಿಯ ವಿಶೇಷ ವಿಸ್ತೀರ್ಣವೂ ಇದೆ.
ಈ ಫ್ಲಾಟ್ ಪ್ರತಿ ಚದರ ಅಡಿಗೆ ಸುಮಾರು 64,891 ರೂ. ದರದಲ್ಲಿ ಮಾರಾಟವಾಗಿದೆ. ಮಾರಾಟಕ್ಕೆ ಸಂಬಂಧಿಸಿದಂತೆ 54 ಲಕ್ಷ ರೂ. ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ. ಅಲ್ಲದೇ, ಫ್ಲಾಟ್ನಲ್ಲಿ 2 ಕಾರು ಪಾರ್ಕಿಂಗ್ ಸ್ಥಳಗಳಿವೆ.
ಟೈಗರ್ ಶ್ರಾಫ್ ಅವರು 2018ರ ಜುಲೈ ತಿಂಗಳಲ್ಲಿ 7.61 ಕೋಟಿ ರೂ. ನೀಡಿ ಈ ಆಸ್ತಿ ಖರೀದಿಸಿದ್ದರು. ಬಳಿಕ ನವೆಂಬರ್ 30, 2019ರಂದು ಫ್ಲಾಟ್ನ ಸ್ವಾಧೀನ ಪಡೆದಿದ್ದರು.
ಟೈಗರ್ ಕಾರಿನ ಮೇಲೆ ಗುಂಡಿನ ದಾಳಿ
ಅಕ್ಟೋಬರ್ 18ರ ಭಾನುವಾರ ಜುಹುವಿನ ಪುಷ್ಪಾ ಪಾರ್ಕ್ ಸಮೀಪ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಟೈಗರ್ ಶ್ರಾಫ್ ಫುಟ್ಬಾಲ್ ಆಡಲು ತೆರಳಿದ್ದು, ಅಲ್ಲಿಂದ ಮನೆಗೆ ಮರಳುತ್ತಿದ್ದ ವೇಳೆ ಘಟನೆ ಸಂಭವಿಸಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ ಮೂವರನ್ನ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಈಗಾಗಲೇ ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನೂ ಕಲೆಹಾಕಿದ್ದಾರೆ.

