– ಪದವೀಧರ ಮತದಾನದ ಹಕ್ಕೇ ಇಲ್ಲದಿದ್ರೂ ಮತ ಚಲಾವಣೆ
ಹಾವೇರಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂಬ ಆರೋಪ ಹಾವೇರಿಯಲ್ಲಿ ಸಂಚಲನ ಮೂಡಿಸಿದೆ.
ನಗರದ ಮತಗಟ್ಟೆ ಸಂಖ್ಯೆ 85ರಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ್ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಎಸ್ಟಿ ಮೋರ್ಚಾದ ನಾಯಕಿ ಶಿಲ್ಪಾ ಬಡಮ್ಮನವರ್ ಅವರು, ಪದವೀಧರ ಮತದಾನದ ಅರ್ಹತೆ ಹೊಂದಿಲ್ಲದಿದ್ದರೂ ಆಶಾ ಪಾಟೀಲ್ ಅವರ ಹೆಸರಿನಲ್ಲಿ ಮತ ಚಲಾಯಿಸಿದ್ದಾರೆ. ಮತಗಟ್ಟೆ ಸಿಬ್ಬಂದಿ ಆಶಾ ಪಾಟೀಲ್ ಅವರ ಹೆಸರನ್ನ ಕರೆದಾಗ ಶಿಲ್ಪಾ ಬಡಮ್ಮನವರ್ ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಚಿವ ರುದ್ರಪ್ಪ ಲಮಾಣಿ ಮತ ಚಲಾಯಿಸಿದ ಬಳಿಕ ಶಿಲ್ಪಾ ಬಡಮ್ಮನವರ್ ಮತದಾನ ಮಾಡಿದ್ದು, ಸಚಿವರೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಮತಗಟ್ಟೆ ಸಂಖ್ಯೆ 85ರಲ್ಲಿ ನಡೆದ ಮತದಾನದ ಕುರಿತು ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನನ್ನ ಪತ್ನಿ ಆಶಾ ಪಾಟೀಲ್ ಹೆಸರಲ್ಲಿ ನಕಲಿ ಮತದಾನ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಮತದಾನ ಮಾಡಿದ ನಂತರ ಉಳಿದ ಕ್ಷೇತ್ರದಲ್ಲಿ ಓಡಾಡಿದ್ದಾನೆ. ನಮ್ಮ ಕುಟುಂಬದವರ ಆರೋಗ್ಯ ಸರಿ ಇರಲಿಲ್ಲ. ಅವರು ಮನೆಯಲ್ಲಿ ಇರಲಿಲ್ಲ. ನನ್ನ ಪತ್ನಿ ಹೆಸರಲ್ಲಿ ದುರುಪಯೋಗ ಆಗಿದ್ದರೆ ತನಿಖೆ ಆಗಲಿ. ವಕೀಲರ ಜೊತೆಗೆ ಮಾತನಾಡಿ ದೂರು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಶಿಲ್ಪಾ ಬಡಮ್ಮನವರ್ ಮತ ಹಾಕಿದ್ದು ನನಗೆ ಗೊತ್ತಿಲ್ಲ. ದೂರು ಸಲ್ಲಿಸುವ ಕೆಲಸ ಮಾಡುತ್ತೇನೆ. ಇದರಲ್ಲಿ ಸಚಿವರ ಪಾತ್ರ ಇಲ್ಲ, ಯಾರು ನಿಂತರೂ ಪೋಟೋ ತೆಗೆದುಕೊಳ್ಳುತ್ತಾರೆ. ನಮಗೂ ಈ ರೀತಿ ಆಗಿದ್ದು ಅಚ್ಚರಿಯಾಗಿದೆ. ಚುನಾವಣಾಧಿಕಾರಿಗಳು ವೋಟರ್ ಐಡಿ ನೋಡಿ ಬಿಡಬೇಕಿತ್ತು. ಅವರು ಹಂಗೆ ಬಿಟ್ಟರೂ ಗೊತ್ತಿಲ್ಲ. ನಮ್ಮ ಮತದಾನ ಬೇರೆಯವರು ಮಾಡಿದ್ದಾರೆ. ವೋಟ್ ಚೋರಿ ಬಗ್ಗೆ ಹೋರಾಟ ಮಾಡಿದವರು ನಾವು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇನೆ ಎಂದರು.


