ನವದೆಹಲಿ: 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (Student) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದೆಹಲಿಯ (Delhi) ಶಾಹದ್ರಾ ಜಿಲ್ಲೆಯ ಕೃಷ್ಣ ನಗರ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ (School) ನಡೆದಿದೆ.
ಸರ್ವೋದಯ ಕನ್ಯಾ ವಿದ್ಯಾಲಯದ ಗಾರ್ಡ್ ರೂಮ್ (ಕಾವಲುಗಾರರ ಕೊಠಡಿ) ಹಿಂಭಾಗದಲ್ಲಿ 17 ವರ್ಷದ ವಿದ್ಯಾರ್ಥಿನಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿ ತನ್ನ ಮೈಮೇಲೆ ಪೆಟ್ರೋಲ್ನಂತಹ ದ್ರವವನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ತನಿಖೆ ವೇಳೆ ಪ್ರೇಮದ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಆಸ್ತಿ ವಿವಾದ – ಮಗಳ ಕಣ್ಣೆದುರೇ ಅತ್ತಿಗೆಯ ಮೇಲೆ ಬೊಲೆರೋ ಹರಿಸಿದ ಮೈದುನ
ಪ್ರಾಥಮಿಕ ತನಿಖೆಯ ವೇಳೆ ವಿದ್ಯಾರ್ಥಿನಿಯ ಶಾಲಾ ಬ್ಯಾಗ್ನಲ್ಲಿ ಮೂರು ಪುಟಗಳ ಪತ್ರವೊಂದು ಪತ್ತೆಯಾಗಿದೆ. ಶಿಕ್ಷಕರ ಮಾಹಿತಿ ಪ್ರಕಾರ, ಆಕೆಯ ಬ್ಯಾಗ್ನಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳು ಕೂಡ ಸಿಕ್ಕಿವೆ. ಅವು ಯಾವ ರೀತಿಯ ವಸ್ತುಗಳು ಎಂಬುದು ಇನ್ನೂ ಖಚಿತಪಟ್ಟಿಲ್ಲ.
ವಿದ್ಯಾರ್ಥಿನಿಯ ಸಹೋದರಿ ಈ ಬಗ್ಗೆ ಪ್ರತಿಕ್ರಿಯಿಸಿ, ಆಕೆ ಸಂತೋಷದಿಂದ ನಗುತ್ತಾ ಶಾಲೆಗೆ ಹೋಗಿದ್ದಳು. ಆಕೆಗೆ ಏನಾಯಿತೆಂದು ನಮಗೆ ಗೊತ್ತಿಲ್ಲ. ಮಧ್ಯಾಹ್ನ 1:40ರ ಸುಮಾರಿಗೆ ಈ ಬಗ್ಗೆ ಶಾಲೆಯಿಂದ ನಮಗೆ ಕರೆ ಬಂತು ಎಂದು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಈ ಘಟನೆಯು ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಲ್ಲಿ ತೀವ್ರ ದುಃಖವನ್ನು ಉಂಟುಮಾಡಿದೆ. ಇದನ್ನೂ ಓದಿ: ಸಾಲ ಮರುಪಾವತಿಸಲಾಗದೇ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ ತಾಯಿ – ಬಾಲಕಿ ಸಾವು

